ಬೆಂಗಳೂರು: ಗ್ರಾಹಕರಿಗೆ ತಲುಪಬೇಕಿರುವ ರಿವಾರ್ಡ್ ಪಾಯಿಂಟ್ಸ್ ಹ್ಯಾಕ್ ಮಾಡಿ ತಾನು ದುಬಾರಿ ವಸ್ತುಗಳನ್ನ ಖರೀದಿಸುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ಬೊಮ್ಮಲೂರು ಲಕ್ಷ್ಮೀಪತಿ ಬಂಧಿತ ಆರೋಪಿ. ಬಂಧಿತನಿಂದ ಬರೋಬ್ಬರಿ 4.16 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಶನ್ ಟೆಕ್ನಾಲಜಿ (IIIT) ಯಲ್ಲಿ ವ್ಯಾಸಂಗ ಮಾಡಿದ್ದ ಆರೋಪಿ ನಂತರ ದುಬೈ, ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಕಾಲ ಕೆಲಸ ಮಾಡಿದ್ದ. ಬಳಿಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಎಥಿಕಲ್ ಹಾಗೂ ಅನ್ ಎಥಿಕಲ್ ಹ್ಯಾಕಿಂಗ್ ಕಲಿತುಕೊಂಡಿದ್ದ ಚಾಲಾಕಿ ರಿವಾರ್ಡ್ 360 ಕಂಪನಿಯ ವೆಬ್‌ಸೈಟ್ ಹ್ಯಾಕ್ ಮಾಡಿ ರಿವಾರ್ಡ್ ಪಾಯಿಂಟ್ಸ್ ಮಾಹಿತಿ ಪಡೆದುಕೊಳ್ಳುತ್ತಿದ್ದನು. ಬಳಿಕ ಆ ರಿವಾರ್ಡ್ಸ ಪಾಯಿಂಟ್ಸ್ಅನ್ನು ತಾನು ಬಳಸಿ ಚಿನ್ನ - ಬೆಳ್ಳಿ ವಸ್ತುಗಳು, ದ್ವಿಚಕ್ರ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿದ್ದನು. ಇದೇ ರೀತಿ ಖಾಸಗಿ ಬ್ಯಾಂಕುಗಳು, ಕಂಪನಿಗಳ ಗ್ರಾಹಕರಿಗೆ ತಲುಪಬೇಕಿದ್ದ ರಿವಾರ್ಡ್ ಪಾಯಿಂಟ್ಸ್ ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಯ ವಿರುದ್ಧ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು: ಚಿತ್ತೂರು ಮೂಲದ ಸೈಬರ್ ಹ್ಯಾಕರ್ ಲಕ್ಷ್ಮೀಪತಿಯನ್ನು ಬಂಧಿಸಿದ್ದು, 5.269 ಕೆ.ಜಿ ಚಿನ್ನ, 27.250 ಕೆ.ಜಿ ಬೆಳ್ಳಿ, 11.13 ಲಕ್ಷ ನಗದು, 7 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳು, ಫ್ಲಿಪ್ಕಾರ್ಟ್ ವ್ಯಾಲೆಟ್ನಲ್ಲಿದ್ದ 26 ಲಕ್ಷ, ಅಮೆಜಾನ್ ವ್ಯಾಲೆಟ್ನಿಂದ 3.50 ಲಕ್ಷ, 2 ಲ್ಯಾಪ್‌ಟಾಪ್, 3 ಮೊಬೈಲ್ ಫೋನ್‌ಗಳ ಸಹಿತ ಒಟ್ಟು 4.16 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು, ರಿವಾರ್ಡ್ ಪಾಯಿಂಟ್ಸ್ ಗ್ರಾಹಕರಿಗೆ ತಲುಪುತ್ತಿರಲಿಲ್ಲ. ಈ ಬಗ್ಗ ಅನುಮಾನಗೊಂಡು, ನಮ್ಮ ಇಲಾಖೆಗೆ ಕಂಪನಿಯವರು ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡ ನಮ್ಮ ಸಿಬ್ಬಂದಿ, ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ರಿವಾರ್ಡ್ ಪಾಯಿಂಟ್ಗಳನ್ನು ನಗದು ಆಗಿ ಬದಲಾವಣೆ ಮಾಡಿಕೊಳ್ಳಬಹುದು. ಆ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಹಣ ಆತನ ಬ್ಯಾಂಕಲ್ಲಿ ಫ್ರೀಜ್ ಆಗಿದೆ. ಇಂದು ಬ್ಯಾಂಕಲ್ಲಿ 26 ಲಕ್ಷ ಹಾಗೂ ಇನ್ನೊಂದು ಬ್ಯಾಂಕಲ್ಲಿ 3 ಲಕ್ಷ ಹಣ ಫ್ರೀಜ್ ಆಗಿದೆ. ಈ ಪ್ರಕರಣವನ್ನು ಭೇದಿಸಿರುವ ನಮ್ಮ ಇಲಾಖೆ ಸಿಬ್ಬಂದಿಗೆ 50 ಸಾವಿರ ರಿವಾರ್ಡ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಬಂದ್ ವೇಳೆ ಚಾಲಕರ ಮೇಲೆ ಹಲ್ಲೆ: ದೂರು ನೀಡಿದರೆ ಕ್ರಮ ಎಂದ ಪೊಲೀಸ್ ಕಮೀಷನರ್