ಬೆಂಗಳೂರು: ಈಗಾಗಲೇ ಕೋವಿಡ್ ವ್ಯಾಕ್ಸಿನ್ ಸಂಬಂಧಿಸಿದಂತೆ ಬಿಬಿಎಂಪಿ ಅಂಕಿ - ಅಂಶಗಳನ್ನು ಕೇಂದ್ರ ಸರ್ಕಾರದ ಪೋರ್ಟಲ್ಗೆ ನಮೂದಿಸಿದೆ. ಆರಂಭಿಕ ಹಂತದಲ್ಲಿ 1 ಲಕ್ಷದ 50 ಸಾವಿರ ಜನರ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, 1 ಲಕ್ಷದ ಐವತ್ತು ಸಾವಿರ ಜನ ಕೋವಿಡ್ ವಾರಿಯರ್ಸ್ಗಳಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಖಾಸಗಿ - ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಮಾಹಿತಿಯನ್ನು ಕೊಡಲಾಗಿದೆ. ಇದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಪಾಲಿಕೆ ಸಿದ್ಧಪಡಿಸಿದೆ. ವ್ಯಾಕ್ಸಿನೇಷನ್ ಕೊಡುವವರ ಸಿದ್ಧತೆಯನ್ನೂ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬರುವ ಆದೇಶಗಳ ಪ್ರಕಾರ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.
ಓದಿ: ಕೋವಿಡ್ ವ್ಯಾಕ್ಸಿನ್ ನೀಡಲು ಭರ್ಜರಿ ತಯಾರಿ: ರಾಜ್ಯದಲ್ಲಿ ಹೀಗಿದೆ ಸ್ಟೋರೇಜ್ ವ್ಯವಸ್ಥೆ
ಸ್ಟೋರೇಜ್ ವ್ಯವಸ್ಥೆ: 25 ಲಕ್ಷ ಜನಕ್ಕೆ ವ್ಯಾಕ್ಸಿನ್ ಕೊಡಲು ಬೇಕಾದ ಸೌಲಭ್ಯ ನಗರದಲ್ಲಿದೆ. ಕೇಂದ್ರ ಸರ್ಕಾರ ಬೆಂಗಳೂರನ್ನು ಪ್ರಾದೇಶಿಕ ಕೇಂದ್ರವಾಗಿ ಮಾಡಿ, ಇಲ್ಲಿಂದ ಬೇರೆಡೆಗೆ ವ್ಯಾಕ್ಸಿನ್ ಹಂಚುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಮುಖ ಸ್ಟೋರೇಜ್ ಸೆಂಟರ್ ನಿರ್ಮಾಣದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ 25 ಐಸ್ ಲೈನ್ಡ್ ರೆಫ್ರಿಜರೇಟರ್ ಕೇಳಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.