ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರಿಗೆ ಹಾಗು ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಕಾರಣ ಸರ್ಕಾರದ ಆಡಳಿತ ಯಂತ್ರಕ್ಕೆ ಗ್ರಹಣ ಹಿಡಿದಿದೆ.
ಕೋವಿಡ್ 3ನೇ ಅಲೆಯನ್ನು ಕಟ್ಟಿಹಾಕಲು ಪ್ರಯತ್ನಪಡುತ್ತಿರುವ ಸರ್ಕಾರ, ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳಲ್ಲಿ ಕೇವಲ ಶೇ. 50ರಷ್ಟು ಸಿಬ್ಬಂದಿ ಮಿತಿಗೊಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಾಸಿಟಿವ್ ಬಂದಿದ್ದು, ಅವರು ಹೋಮ್ ಐಸೋಲೇಷನ್ನಲ್ಲಿದ್ದಾರೆ. ಅದೇ ರೀತಿ ಕಂದಾಯ ಸಚಿವ ಆರ್. ಅಶೋಕ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೂ ಕೊರೊನಾ ಬಾಧಿಸಿದ್ದು, ಎಲ್ಲರೂ ಚಿಕಿತ್ಸೆಯಲ್ಲಿದ್ದಾರೆ.
ಇನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕೊರೊನಾದಿಂದ ಗುಣಮುಖರಾದರೂ ವಿಧಾನಸೌಧಕ್ಕೆ ಇನ್ನೂ ಬಂದಿಲ್ಲ. ಅದೇ ರೀತಿ ಬಹುತೇಕ ಸಚಿವರು ವಿಧಾನಸೌಧದ ಕಡೆ ಮುಖ ಮಾಡುತ್ತಿಲ್ಲ. ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಕಡತ ವಿಲೇವಾರಿ ಕೂಡ ಕುಂಟುತ್ತಾ ಸಾಗಿದೆ. ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲೂ ನಿರ್ಬಂಧಗಳನ್ನು ಹೇರಲಾಗಿದೆ.
ಸರ್ಕಾರಿ ಕಚೇರಿಗಳಲ್ಲೂ ಶೇ. 50 ರ ಫಾರ್ಮುಲಾವನ್ನು ಅಳವಡಿಸಲಾಗಿದೆ. ಎಲ್ಲಾ ಇಲಾಖೆಗಳ ಶೇ 50ರಷ್ಟು ಸಿಬ್ಬಂದಿಯನ್ನು ಕೋವಿಡ್ ನಿರ್ವಹಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೀಗಾಗಿ, ರಾಜ್ಯದ ಬಹುತೇಕ ಆಡಳಿತ ಯಂತ್ರ ಕೊರೊನಾ ನಿಯಂತ್ರಣ ಮಾಡುವ ಕಡೆ ನಿರತವಾಗಿದೆ. ಸರ್ಕಾರಿ ದೈನಂದಿನ ಕಾರ್ಯ ನಿರ್ವಹಿಸಲು ಕೇವಲ ಶೇ 50ರಷ್ಟು ಸಿಬ್ಬಂದಿ, ಅಧಿಕಾರಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಈ ಕೋವಿಡ್ ನಿಯಂತ್ರಣ ಕ್ರಮಗಳಿಂದ ಕಡತ ವಿಲೇವಾರಿಗೆ ದೊಡ್ಡ ಪ್ರಮಾಣದಲ್ಲಿ ಹಿನ್ನಡೆಯಾಗಲಿದೆ ಎಂಬ ಆತಂಕ ಎದುರಾಗಿದೆ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಇಲಾಖೆಗಳ ಸಾವಿರಾರು ಕಡತಗಳ ವಿಲೇವಾರಿ ಪ್ರಕ್ರಿಯೆ ವಿಳಂಬವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಗಳ ವಿಲೇವಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿರಲಿಲ್ಲ. ಹೀಗಾಗಿ, ಕೆಲಸವನ್ನು ಚುರುಕುಗೊಳಿಸಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರೂ, ಆಡಳಿತ ಯಂತ್ರದಲ್ಲಿ ಮಾತ್ರ ಕಡತಗಳ ವಿಲೇವಾರಿ ನಿಧಾನಗತಿಯಲ್ಲಿ ಸಾಗಿದೆ. ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಕೋವಿಡ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಸರ್ಕಾರಕ್ಕೆ ತಲೆಬಿಸಿ ತರಿಸಿದೆ.
ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸಚಿವಾಲಯದ ಕಚೇರಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಪರಿಷತ್ ಸಚಿವಾಲಯದ ಕಚೇರಿಗೆ ಭೇಟಿ ನೀಡಿದ ಹೊರಟ್ಟಿ, ಕೊರೊನಾ ನಿಯಮಾವಳಿ ಪಾಲನೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಜನವರಿ 31ರ ವರೆಗೆ ಶಾಲೆಗಳ ಭೌತಿಕ ತರಗತಿ ಸ್ಥಗಿತ: ಸಚಿವ ನಾಗೇಶ್