ಬೆಂಗಳೂರು: ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಹೀಗಾಗಿ, ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿರುವ ವಿನಯ್ ಕುಲಕರ್ಣಿಗೆ ಭಾರಿ ಹಿನ್ನಡೆಯಾಗಿದೆ.
50 ದಿನಗಳ ಕಾಲ ಧಾರವಾಡ ಪ್ರವೇಶಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾ.ಬಿ.ಜಯಂತ್ ಕುಮಾರ್ ವಜಾಗೊಳಿಸಿದರು. ಕೊಲೆ ಪ್ರಕರಣ ಸಂಬಂಧ ಧಾರವಾಡ ಪ್ರವೇಶಿಸಕೂಡದು. ಅಗತ್ಯಬಿದ್ದಾಗ ಮಾತ್ರ ಸಿಬಿಐ ಅಧಿಕಾರಿಗಳ ಜೊತೆಯಲ್ಲಿ ತೆರಳಬೇಕು ಎಂದು ಷರತ್ತು ವಿಧಿಸಿ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಗೆ ಜಾಮೀನು ನೀಡಿತ್ತು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್, 50 ದಿನಗಳ ಕಾಲ ಧಾರವಾಡ ಪ್ರವೇಶಕ್ಕೆ ವಿಶೇಷ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿ, ಸ್ಥಳೀಯ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವಂತೆ ತಿಳಿಸಿತ್ತು. ಇದರಂತೆ ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಾದ ಮಂಡಿಸಿದ್ದ ಸಿಬಿಐ ಪರ ವಕೀಲರು, ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಆರೋಪಿ ವಿರುದ್ಧ 120 ಸಾಕ್ಷಿದಾರರ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ಈ ಹಂತದಲ್ಲಿ ಅನುಮತಿ ನೀಡಿದರೆ ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆಯಿದೆ. ರಾಜಕೀಯ ಪ್ರಭಾವ ಬಳಸಿ ತನಿಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯಿದೆ. ಹೀಗಾಗಿ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇದರಂತೆ ಧಾರವಾಡ ಪ್ರವೇಶಿಸದಂತೆ ನ್ಯಾ.ಬಿ.ಜಯಂತ್ ಕುಮಾರ್ ಅವರು ಆದೇಶಿಸಿದ್ದಾರೆ.
2016ರಲ್ಲಿ ಧಾರವಾಡದ ಹೆಬ್ಬಾಳಿಯಲ್ಲಿ ಜಿಲ್ಲಾ ಪಂಚಾಯತ್ನ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್ ಗೌಡ ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರವು ಸಿಬಿಐಗೆ ಒಪ್ಪಿಸಿತ್ತು. ಹತ್ಯೆಯ ಹಿಂದೆ ವಿನಯ್ ಕುಲಕರ್ಣಿ ಕೈವಾಡ ಹಿನ್ನೆಲೆ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. 9 ತಿಂಗಳ ಕಾಲ ನ್ಯಾಯಾಂಗ ಬಂಧನ ಬಳಿಕ ಷರತ್ತುಬದ್ದ ಜಾಮೀನು ಪಡೆದು ಹೊರಬಂದಿದ್ದರು.
ಕೋರ್ಟ್ ಆದೇಶದಿಂದ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವುದು ಅಸಾಧ್ಯವಾಗಿದೆ. ಹಾವೇರಿಯ ಶಿಗ್ಗಾಂವ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೊಮ್ಮಾಯಿ ಕಟ್ಟಿ ಹಾಕಲು ಕಾಂಗ್ರೆಸ್ ಕಾರ್ಯತಂತ್ರ; ಶಿಗ್ಗಾಂವಿಯಿಂದ ವಿನಯ್ ಕುಲಕರ್ಣಿ ಕಣಕ್ಕೆ?