ಬೆಂಗಳೂರು : ದೃಶ್ಯ ಮಾಧ್ಯಮಗಳಲ್ಲಿ ಅಶ್ಲೀಲ-ಅಸಭ್ಯ, ಹಿಂತಾಸತ್ಮಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋ-ಆಡಿಯೋ ತುಣಕುಗಳನ್ನು ಪ್ರಸಾರ ಮಾಡುವುದನ್ನು ನಿಯಂತ್ರಿಸಲು ಶಾಸನಾತ್ಮಕ ನಿಯಮ ರೂಪಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಬೆಂಗಳೂರಿನ ವಕೀಲ ಹೆಚ್. ನಾಗಭೂಷಣ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ರಾಜ್ಯದ 9 ಖಾಸಗಿ ಸುದ್ದಿವಾಹಿನಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಓದಿ : ನೌಕರರ ಮುಷ್ಕರ.. ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೋರಿ ಹೈಕೋರ್ಟ್ಗೆ ಪಿಐಎಲ್
ಪಿಐಎಲ್ ಸಾರಾಂಶ : ರಾಜ್ಯದ ಸುದ್ದಿವಾಹಿನಿಗಳು, ರಾಜಕಾರಣಿಗಳು, ಧಾರ್ಮಿಕ ಗುರುಗಳು ಮತ್ತು ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಅಶ್ಲೀಲ-ಅಸಭ್ಯ, ಹಿಂತಾಸತ್ಮಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋ-ಆಡಿಯೋ ತುಣಕುಗಳನ್ನು ಪ್ರಸಾರ ಮಾಡುತ್ತಿವೆ. ಇಂತಹ ವಿಡಿಯೋ-ಆಡಿಯೋ ತುಣುಕುಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ.
ಮನೆಮಂದಿ ಒಟ್ಟಿಗೆ ಕೂತು ಸುದ್ದಿ ವಾಹಿನಿಗಳನ್ನು ವೀಕ್ಷಿಸಲು ಆಗದಂತ ಪರಿಸ್ಥಿತಿ ಇದೆ. ಇಂತಹ ಕ್ರಮವನ್ನು ನಿಯಂತ್ರಿಸಲು ದೇಶದಲ್ಲಿ ನಿರ್ದಿಷ್ಟ ಕಾನೂನು ಇಲ್ಲ. ಆದ್ದರಿಂದ, ಅಶ್ಲೀಲ-ಅಸಭ್ಯ, ಹಿಂತಾಸತ್ಮಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋ-ಆಡಿಯೋ ತುಣಕುಗಳನ್ನು ಪ್ರಸಾರ ಮಾಡುವುದರಿಂದ ಮಾಧ್ಯಮಗಳನ್ನು ನಿಯಂತ್ರಿಸಲು ಶಾಸನಾತ್ಮಕ ನಿಯಮ ರೂಪಿಸಬೇಕು.
ಅದೇ ರೀತಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣಗಳನ್ನು ಮಾಧ್ಯಮಗಳು ವಿಶ್ಲೇಷಣೆ ಮಾಡುವುದನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು. ಇಂತಹ ಪ್ರಕರಣಗಳ ತನಿಖೆ ವೇಳೆ ಸಂಗ್ರಹಿಸುವ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕು. ಟಿಆರ್‌ಪಿಗಾಗಿ ಇಂತಹ ಸುದ್ದಿಗಳನ್ನು ವೈಭವೀಕರಿಸಿ ಪ್ರಸಾರ ಮಾಡದಂತೆ ಎಲ್ಲಾ ಸುದ್ದಿ ವಾಹಿನಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.