ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಕೊರೊನಾ ಪಾಸಿಟಿವ್ ರೋಗಿಗಳ ಹಾಟ್ ಸ್ಪಾಟ್ ಆಗಿರಲಿದೆ. ಇನ್ಮುಂದೆ ವಿಕ್ಟೋರಿಯಾದಲ್ಲಿ ಕೊರೊನಾ ರೋಗಿಗಳು ಮಾತ್ರ ದಾಖಲಾಗುತ್ತಾರೆ. ಈಗಾಗಲೇ ನಗರದ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳನ್ನ ವಿಕ್ಟೋರಿಯಾಗೆ ರವಾನಿಸಲಾಗುತ್ತಿದೆ.
ವಿಕ್ಟೋರಿಯಾ ಆಸ್ಪತ್ರೆ ಭರ್ತಿಯಾದ ಮೇಲೆ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳಲು ತೀರ್ಮಾನ ಮಾಡಿದ್ದು, ನಿನ್ನೆ ಕೆಸಿ ಜನರಲ್ ಆಸ್ಪತ್ರೆಯಿಂದ ಇಬ್ಬರು ಕೊರೊನಾ ಪಾಸಿಟಿವ್ ರೋಗಿಗಳನ್ನ ವಿಕ್ಟೋರಿಯಾಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ 550 ಐಸೋಲೇಷನ್ ಬೆಡ್, 50 ಐಸಿಯುನೊಂದಿಗೆ ವೆಂಟಿಲೇಟರ್ ವ್ಯವಸ್ಥೆ ಇದೆ. ಹೀಗಾಗಿ ಕೊರೊನಾ ಪಾಸಿಟಿವ್ ರೋಗಿಗಳನ್ನ ವಿಕ್ಟೋರಿಯಾದಲ್ಲೇ ದಾಖಲು ಮಾಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ರಾಜೀವ್ ಗಾಂಧಿ ಹಾಗೂ ವಿಕ್ಟೋರಿಯಾದಲ್ಲಿ ಮಾತ್ರ ಕೊರೊನಾ ಪಾಸಿಟಿವ್ ರೋಗಿಗಳನ್ನ ದಾಖಲು ಮಾಡಿಕೊಳ್ಳಲಾಗುತ್ತೆ. ಹೀಗಾಗಿ, ಇನ್ಮುಂದೆ ಕೆಸಿ ಜನರಲ್ ಆಸ್ಪತ್ರೆ ಕೊರೊನಾ ಪಾಸಿಟಿವ್ ರೋಗಿಗಳಿಂದ ಮುಕ್ತವಾಗಲಿದ್ದು, ಬೇರೆ ಬೇರೆ ಆರೋಗ್ಯ ಸಮಸ್ಯೆ ಇರುವವರು ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ.
ಬೆಂಗಳೂರಿನ ಕೆ ಸಿ ಜನರಲ್ ಜೊತೆಗೆ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸೈಂಟ್ ಜಾನ್ಸ್ ಆಸ್ಪತ್ರೆಗಳಲ್ಲಿ ಕೋವಿಡ್-19 ವಾರ್ಡ್ ಮಾಡಲಾಗಿತ್ತು. ಆದರೆ ಈ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಿದ್ದರು. ಹೀಗಾಗಿ ಕೋವಿಡ್-19 ಪಾಸಿಟಿವ್ ರೋಗಿಗಳಿಗೆ ಒಂದೆಡೆ ಚಿಕಿತ್ಸೆ ನೀಡಲು ತೀರ್ಮಾನಿಸಿದ್ದು, ಎಲ್ಲಾ ಪಾಸಿಟಿವ್ ರೋಗಿಗಳನ್ನ ವಿಕ್ಟೋರಿಯಾಗೆ ರವಾನಿಸಲು ಆರೋಗ್ಯ ಇಲಾಖೆ ಮುಂದಾಗಿದೆ.