ಬೆಂಗಳೂರು: ಕೆಪಿಸಿಸಿ ಮಾಧ್ಯಮ ವಿಭಾಗಕ್ಕೆ ಸಂಯೋಜಕರನ್ನು ನೇಮಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಮತ್ತು ಸಂವಹನ ವಿಭಾಗಕ್ಕೆ ವಿಭಾಗವಾರು ಸಂಯೋಜಕರನ್ನು ನೇಮಿಸಲಾಗಿದ್ದು, ಅವರಿಗೆ ನಿರ್ದಿಷ್ಟ ಜಿಲ್ಲೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಮಾಧ್ಯಮ ಸಂಯೋಜಕರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಕ್ತಾರರು ಮತ್ತು ಪ್ಯಾನಲಿಸ್ಟ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಕೇಂದ್ರ ಸ್ಥಾನ, ಜಿಲ್ಲೆ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಾರ ನಡೆಯಬೇಕಾದ ಸುದ್ದಿಗೋಷ್ಠಿ ಮತ್ತಿತರ ವಿಚಾರಗಳ ಬಗ್ಗೆ ಕೆಪಿಸಿಸಿ ಪರವಾಗಿ ಕಾರ್ಯನಿರ್ವಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಓದಿ : ಕೊರೊನಾ ನಿಯಂತ್ರಣ, ಪರಿಹಾರ ಕಾರ್ಯಕ್ರಮಗಳ ಪರಿಶೀಲನೆ: ಮೂರು ದಿನ ಡಿಕೆಶಿ ರಾಜ್ಯ ಪ್ರವಾಸ
ಜಿಲ್ಲೆಯ ಮತ್ತು ವಿಧಾನಸಭಾ ಕ್ಷೇತ್ರವಾರು ವಕ್ತಾರರನ್ನು ನೇಮಿಸಲು ಸೂಕ್ತ ಹೆಸರುಗಳನ್ನು ಪಡೆಯುವ, ಅವರುಗಳ ಕಾರ್ಯಶೈಲಿಯನ್ನು ಗಮನಿಸುವ ಮತ್ತು ವಿವಿಧ ಜಿಲ್ಲೆಗಳಲ್ಲಿ ವರದಿಯಾಗುವ ವಿಚಾರಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರುವ ಜವಾಬ್ದಾರಿಗಳನ್ನು ನೂತನ ಮಾಧ್ಯಮ ಸಂಯೋಜಕರು ನಿರ್ವಹಿಸುತ್ತಾರೆ. ಇವರಿಗೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು, ಸಂಸದರು, 2018ರ ವಿಧಾನಸಭಾ ಅಭ್ಯರ್ಥಿಗಳು ಸಂಪೂರ್ಣ ಸಹಕಾರ ನೀಡುವಂತೆ ಆದೇಶದಲ್ಲಿ ಕೋರಲಾಗಿದೆ.
ಸಂಯೋಜಕರು ಮತ್ತು ವಿಭಾಗ:
- ಎಂ.ರಾಮಚಂದ್ರಪ್ಪ, ಮಾಜಿ ಮೇಯರ್ - ಬೆಂಗಳೂರು ನಗರ
- ಎಂ.ಎ.ಸಲೀಂ, ಅನಿಲ್ ಕುಮಾರ್ - ಬೆಂಗಳೂರು ವಿಭಾಗ
- ಜಿ.ಸಿ.ರಾಜು - ಮೈಸೂರು ವಿಭಾಗ
- ಅನಿಲ್ - ಕಲಬುರಗಿ ವಿಭಾಗ
- ನಾಗರಾಜ ಯಾದವ್ - ಬೆಳಗಾವಿ ವಿಭಾಗ