ಬೆಂಗಳೂರು: ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಸದಸ್ಯರು ನಿರ್ವಹಿಸಿರುವ ಕಾಮಗಾರಿಗಳ ಬಿಲ್ ಪಾವತಿ ಮಾಡುವಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು, ಬೆಂಗಳೂರು ಸಚಿವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿಗಳ ಭೇಟಿ ಮಾಡಿ ಮನವಿ ಮಾಡುತ್ತಿದ್ದು, ಎಲ್ಲರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಬಾಕಿ ಬಿಲ್ ಪಾವತಿ ವಿಚಾರದಲ್ಲಿ ಸರ್ಕಾರದ ನಿರ್ಧಾರ ನೋಡಿಕೊಂಡು ನಂತರ ಸರ್ಕಾರದ ವಿರುದ್ಧ ಪ್ರತಿಭಟನೆ ಅಸ್ತ್ರ ಪ್ರಯೋಗದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ ಟಿ ಮಂಜುನಾಥ್ ತಿಳಿಸಿದ್ದಾರೆ.
ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಚಾರದ ಕುರಿತು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಇದರಿಂದ ಇನ್ನೂ ಯಾವುದೇ ಉಪಯೋಗ ಆಗಿಲ್ಲ. ಬರೀ ಸಮಯ ವ್ಯರ್ಥವಾಗುತ್ತಿದೆ. ಬಿಲ್ ಪಾವತಿ ಕುರಿತು ಅಧಿಕಾರಿಗಳಿಗೆ ಯಾವುದೇ ಮಾಹಿತಿ ಬರುತ್ತಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ಏನು ಸಾಧ್ಯವಿಲ್ಲ ಎಂದು ಮನಗಂಡ ನಂತರ ನಾವೆಲ್ಲಾ ಸೇರಿ ಮಾಧ್ಯಮಗೋಷ್ಟಿ ನಡೆಸಿದ್ದೆವು. ನಂತರ ಗುತ್ತಿಗೆದಾರರ ಸಲಹೆಯನುಸಾರ ನಾವು ರಾಜಕಾರಣಿಗಳಿಗೆ ಮನವಿ ಮಾಡುವ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಿದ್ದೇವೆ ಎಂದರು.
ಬೆಂಗಳೂರಿನ 28 ಶಾಸಕರಿಗೂ ಕೂಡ ಪಕ್ಷಾತೀತವಾಗಿ ಮನವಿ ಮಾಡುತ್ತಿದ್ದು, ನಮ್ಮ ಪರ ನಿಲ್ಲಬೇಕು ಎಂದು ಮನವಿ ಮಾಡಿದ್ದೇವೆ. ಚುನಾವಣೆ ಸಮಯದಲ್ಲಿ ನಮ್ಮಿಂದ ಕಾಮಗಾರಿಗಳನ್ನು ಮಾಡಿಸಿದ್ದೀರಿ. ಈಗ ನೀವು ನಮ್ಮ ಪರ ನಿಲ್ಲಬೇಕು ಎಂದು ಮನವಿ ಮಾಡಿದ್ದೇವೆ. ಅವರೆಲ್ಲಾ ಸಕಾರಾಥ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಸ್ಥಳೀಯ ಶಾಸಕರಿಗೆ ನಮ್ಮ ಗುತ್ತಿಗೆದಾರರ ಕೆಲಸದ ಬಗ್ಗೆ ಎಲ್ಲ ಗೊತ್ತಿದೆ. ಅದನ್ನು ಮೀರಿ ತನಿಖೆ ನೆಪದಲ್ಲಿ ಗುತ್ತಿಗೆದಾರರ ಬಿಲ್ ಪಾವತಿಗೆ ತಡೆಯೊಡ್ಡುತ್ತಿದ್ದಾರೆ. ಮುಖ್ಯ ಆಯಕ್ತರು ತನಿಖೆಗೆ ಶಿಫಾರಸು ಮಾಡಿದ್ದು, ಚೀಫ್ ಇಂಜಿನಿಯರ್ ತನಿಖೆ ಮಾಡಿ ಮುಖ್ಯ ಆಯುಕ್ತರಿಗೆ ಮತ್ತು ಡಿಸಿಎಂಗೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೂ ನಮ್ಮ ಬಿಲ್ ಪಾವತಿ ವಿಳಂಬವಾಗುತ್ತಿದೆ. ಹಾಗಾಗಿ ನಾವು ಬಿಲ್ ಪಾವತಿ ಮಾಡುವಂತೆ ಮನವಿ ಮಾಡಲು ಮುಂದಾಗಿದ್ದೇವೆ. ಬೆಂಗಳೂರಿನ ಸಚಿವರನ್ನು ಭೇಟಿ ಮಾಡಿದ್ದೆವು. ಅದೇ ರೀತಿ ಈಗ ಬಿಎಸ್ವೈ ಭೇಟಿ ಮಾಡಿದ್ದೇವೆ. ಎಲ್ಲ ರೀತಿಯಲ್ಲೂ ನಾವು ಮನವಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಗುತ್ತಿಗೆದಾರರಿಗೆ ಅವರದ್ದೇ ಆದ ಸಂಕಷ್ಟ ಇರಲಿದೆ. ಗುತ್ತಿಗೆದಾರರಿಗೆ ನಾವು ವೈಯಕ್ತಿಕವಾಗಿ ಏನೂ ಮಾಡಲು ಸಾಧ್ಯವಿಲ್ಲ. ಹೋರಾಟ ಮಾಡಬಹುದು. ರಾಜ್ಯಪಾಲರ ಭೇಟಿ ವೇಳೆ ಗುತ್ತಿಗೆದಾರರು ತಮ್ಮಲ್ಲಿನ ಸಂಕಟ ಹೊರಹಾಕಿದ್ದಾರೆ. ಕೆಲ ಗುತ್ತಿಗೆದಾರರು ರಾಜ್ಯಪಾಲರಿಗೆ ತಮ್ಮ ಬಳಿ ಇರುವ ಮಾಹಿತಿ ನೀಡಿ ಬಿಲ್ ಪಾವತಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಕೆಲವರು ರಾಜ್ಯಪಾಲರ ಕಾಲು ಹಿಡಿದು ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯಪಾಲರು ಕೂಡ ಸಿಎಂ, ಡಿಸಿಎಂ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಗುತ್ತಿಗೆದಾರರಿಗೆ ಕಳೆದ 30 ತಿಂಗಳಿನಿಂದ 2,500 ಕೋಟಿ ಮಾತ್ರ ಬಾಕಿ ಇದೆ. ಇದರಲ್ಲಿ ಈಗಾಗಲೇ ₹2000 ಕೋಟಿ ಅಕೌಂಟ್ನಲ್ಲಿ ಶೇಖರಣೆಯಾಗಿದೆ. ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಗೆ ಅನುಮತಿ ಕೋರಿ ಮುಖ್ಯ ಆಯುಕ್ತರಿಗೆ ಪತ್ರ ಕೂಡ ಬರೆದಿದ್ದಾರೆ. ಆದರೂ ಮುಖ್ಯ ಆಯುಕ್ತರು ಗಮನ ಹರಿಸಿಲ್ಲ. ಇದರ ನಡುವೆ ಸೀನಿಯಾರಿಟಿ ನಿಯಮ ಉಲ್ಲಂಘಿಸಿ ಯಾರಿಗೋ 675 ಕೋಟಿಯಲ್ಲಿ 75 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿಸಿದ್ದಾರೆ ಎನ್ನುವ ಗುಮಾನಿ ಇದೆ. ಆ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇವೆ. ಅವರಿಗೆ ಬೇಕಾದವರಿಗೆ ಹಣ ಪಾವತಿ ಮಾಡುವುದಾದರೆ ಗುತ್ತಿಗೆದಾರರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಈ ಸರ್ಕಾರ ಬಂದು 3 ತಿಂಗಳಾಗಿದೆ. ಹಳೆಯ ಬಿಲ್ ಪಾವತಿಯನ್ನು ಯಾಕೆ ವಿಳಂಬ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಕೆಲ ಗುತ್ತಿಗೆದಾರರು ಮಧ್ಯವರ್ತಿಗಳು ಹಣ ಕೇಳುತ್ತಿರುವ ಮಾಹಿತಿ ನೀಡಿದ್ದಾರೆ. ಈ ವ್ಯವಸ್ಥೆಯಲ್ಲಿ ಇದು ಸಹಜ, ಹಾಗಾಗಿ ಭ್ರಷ್ಟಾಚಾರ ತಡೆಗೆ ಎಲ್ಲ ರಾಜಕೀಯ ಪಕ್ಷಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.
ಸದ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಕುರಿತು ಇನ್ನು ನಿರ್ಧಾರ ಮಾಡಿಲ್ಲ. ಎಲ್ಲ ಶಾಸಕರ ಭೇಟಿ ಮಾಡುತ್ತಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಾವೆಲ್ಲಾ ಶಾಸಕರನ್ನು ಭೇಟಿ ಮಾಡಿದ ನಂತರ ಅವರಿಂದಾಗುವ ಫಲಿತಾಂಶ ನೋಡಿ ಮುಂದೆ ಯಾವ ರೀತಿ ಹೋರಾಟ ನಡೆಸಬೇಕು, ಪ್ರತಿಭಟನೆ ನಡೆಸಬೇಕು ಎನ್ನುವ ನಿರ್ಧಾರ ಮಾಡಲಿದ್ದೇವೆ ಎಂದರು.
ಬಿಎಸ್ವೈ ಭೇಟಿ ಮಾಡಿ ಮನವಿ: ಇದಕ್ಕೂ ಮುನ್ನ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಬಿಬಿಎಂಪಿ ಗುತ್ತಿಗೆದಾರರ ನಿಯೋಗ ಭೇಟಿ ನೀಡಿತ್ತು. ಬಾಕಿ ಬಿಲ್ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಸಹಕಾರ ನೀಡುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಕಮಿಷನ್ ವಿಚಾರವಾಗಿ ಬಿಎಸ್ವೈ ಭೇಟಿ ಮಾಡಿದ ಗುತ್ತಿಗೆದಾರರು