ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನವರು ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸಲು ಹೊರಟಿದ್ದಾರೆ. ಕಾಂಗ್ರೆಸ್ನವರು ಯಾಕೆ ಇಷ್ಟು ಸುಳ್ಳು ಹೇಳುತ್ತಾರೋ?. ದಿನಗಳು ಕಳೆದಂತೆ ಚರಿತ್ರೆ ಹೊರ ಬರುತ್ತಿವೆ. ಲೇಹರ್ ಸಿಂಗ್ ಯಡಿಯೂರಪ್ಪರ ಅಭ್ಯರ್ಥಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಇಂದು ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಆತ್ಮಸಾಕ್ಷಿಗೆ ಅನುಸಾರ ಮತ ಹಾಕಿದರೆ ಜೆಡಿಎಸ್ನ ಅನೇಕರು ಕಾಂಗ್ರೆಸ್ಗೆ ವೋಟ್ ಹಾಕುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ಯಾವ ಆತ್ಮ ಸಾಕ್ಷಿ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಯಾರು ಎಂಬುದನ್ನು ಡಿ.ಕೆ. ಶಿವಕುಮಾರ್ ಕೇಳಲಿ ಎಂದ ಇಬ್ರಾಹಿಂ, ನನಗೆ ಬೆಂಬಲ ಕೊಡುತ್ತೇನೆ ಎಂದರಲ್ಲ, ಕಾಂಗ್ರೆಸ್ನವರು ಪರಿಷತ್ನಲ್ಲೇ ನನಗೆ ಬೆಂಬಲಿಸಲಿಲ್ಲ. ಇಲ್ಲಿ ಮಾಡ್ತೀನಿ ಎನ್ನುತ್ತಾರಲ್ಲ, ಜೀವವೇ ಶಾಶ್ವತ ಅಲ್ಲ, ರಾಜಕೀಯ ಮಾಡುತ್ತೀರಲ್ಲ. ಹಾಗಾದರೆ, ಈ ಬಗ್ಗೆ ಪ್ರಮಾಣ ಮಾಡಲಿ. ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸಲು ಎರಡನೇ ಅಭ್ಯರ್ಥಿ ಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕೀಯ ಸನ್ಯಾಸ: 2023ರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಜೆಡಿಎಸ್ಗೆ ಬರುವ ವಿಶ್ವಾಸ ಇದೆ. ಒಂದು ವೇಳೆ ಹೆಚ್ಚು ಸ್ಥಾನ ಬರದಿದ್ದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುವುದಾಗಿ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದರು.
ನಾನು ನನ್ನ ಮಾತಿಗೆ ಬದ್ಧನಾಗಿರುತ್ತೇನೆ. ಕಾಂಗ್ರೆಸ್ನವರು ಇಂತಹ ಚಾಲೆಂಜ್ ತೆಗೆದುಕೊಳ್ತಾರಾ? ಎಂದು ಪ್ರಶ್ನಿಸಿದ ಅವರು, ಜೆಡಿಎಸ್ನವರು ನಮಗೆ ಪಕ್ಷದ ಕೀಲಿಕೈ ಕೊಟ್ಟಿದ್ದಾರೆ. ಪಕ್ಷ ಸಂಪೂರ್ಣವಾಗಿ ಅಧಿಕಾರಕ್ಕೆ ಬರಲಿದೆ ಎಂದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಅತೃಪ್ತ ಜೆಡಿಎಸ್ ಶಾಸಕರ ಮತಗಳ ಮೇಲೆ ಕಾಂಗ್ರೆಸ್, ಬಿಜೆಪಿ ಕಣ್ಣು !