ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳು ಹಾಗೂ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಉಭಯ ಸದನಗಳ ಕಾಂಗ್ರೆಸ್ ಹಿರಿಯ ಸದಸ್ಯರ ಸಭೆ ನಡೆಯುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಹಿರಿಯ ಸದಸ್ಯರಾದ ರಮೇಶ್ ಕುಮಾರ್, ಹೆಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ಎಂ ಬಿ ಪಾಟೀಲ್ ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದಾರೆ.
ಈ ಸಭೆಯಲ್ಲಿ ಅತ್ಯಂತ ಪ್ರಮುಖವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಅಸ್ತ್ರಗಳನ್ನ ಬಳಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗ್ತಿದೆ. ವಿಧಾನಪರಿಷತ್ ಸಭಾಪತಿ ಬದಲಿಸಲು ಬಿಜೆಪಿ ಮುಂದಾಗಿರುವ ಬಗ್ಗೆ ಹಾಗೂ ಅದಕ್ಕಾಗಿ ನಡೆಸಿರುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಸಭಾಪತಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಜೊತೆ ಮಾತುಕತೆ ನಡೆಸುವ ಹಾಗೂ ಮೈತ್ರಿ ಮಾಡಿಕೊಳ್ಳುವ ಸಂಬಂಧ ಗಂಭೀರ ಚರ್ಚೆ ನಡೆಯಲಿದೆ.
ಇವುಗಳ ಜೊತೆಗೆ ಕಳೆದ ಅಧಿವೇಶನದಲ್ಲಿ ವಿಧಾನಪರಿಷತ್ನಲ್ಲಿ ಅನುಮೋದನೆ ಪಡೆಯದೆ ಹಾಗೆ ಉಳಿದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಮತ್ತೊಮ್ಮೆ ಪ್ರಸ್ತಾಪಕ್ಕೆ ಬರಲಿರುವ ಸರ್ಕಾರದ ವಿರುದ್ಧ ಹೋರಾಟ ಹಾಗೂ ಕಾಯ್ದೆಯನ್ನು ಮತ್ತೊಮ್ಮೆ ವಿಫಲಗೊಳಿಸುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ವಿಧಾನಪರಿಷತ್ನಲ್ಲಿ ಮತಕ್ಕೆ ಹಾಕಿ ವಿಫಲಗೊಳಿಸಿರುವ ಮತ್ತೊಂದು ಮಹತ್ವದ ವಿಧೇಯಕ ಕಾರ್ಮಿಕ ತಿದ್ದುಪಡಿ ಕಾಯ್ದೆ ಕಾಯ್ದೆ ಕೂಡ ಈ ಬಾರಿ ಮತ್ತೊಮ್ಮೆ ಮಂಡನೆಯಾಗಲಿದೆ. ಅದನ್ನು ವಿಫಲಗೊಳಿಸುವ ವಿಚಾರವಾಗಿ ಗಂಭೀರ ಚರ್ಚೆ ನಡೆಯುತ್ತಿದೆ.
ಒಟ್ಟಾರೆ ಪ್ರಸಕ್ತ ವಿಧಾನಸಭೆ ಹಾಗೂ ವಿಧಾನ ಪರಿಷತ್ ಉಭಯ ಸದನಗಳ ಅಧಿವೇಶನದಲ್ಲಿ ಇರಬೇಕು ಎಂಬ ಕುರಿತು ಹಿರಿಯ ನಾಯಕರಿಗೆ ಮನದಟ್ಟು ಮಾಡಿಕೊಡುವ ಕಾರ್ಯವನ್ನು ಪಕ್ಷದ ಹಿರಿಯ ನಾಯಕರು ಮಾಡಲಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಮುಖ್ಯ ಸಚೇತಕರಾದ ಅಜಯ್ ಸಿಂಗ್ ಹಾಗೂ ನಾರಾಯಣಸ್ವಾಮಿ ಹಿರಿಯ ನಾಯಕರ ಸಭೆಯಲ್ಲಿ ಉಪಸ್ಥಿತರಿದ್ದು, ಇಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಶಾಸಕರಿಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡಲಿದ್ದಾರೆ.
ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದು, ಮಹತ್ವದ ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಪಾಲ್ಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕರಿಗೆ ಮಾರ್ಗದರ್ಶನ ನೀಡಲಿದ್ದು, ಇಲ್ಲಿ ಬರುವ ಒಮ್ಮತದ ತೀರ್ಮಾನವನ್ನು ಉಳಿದ ಶಾಸಕರಿಗೂ ಮನದಟ್ಟು ಮಾಡಿಕೊಡುವ ಕಾರ್ಯ ಆಗಲಿದೆ.