ಬೆಂಗಳೂರು : ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡಿದರು ಎಂಬ ಆರೋಪ ಹೊತ್ತಿರುವವರ ಪೈಕಿ ಒಬ್ಬರ ವಿರುದ್ಧ ಕ್ರಮ ಕೈಗೊಂಡಿರುವ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಮತ್ತೊಬ್ಬರ ಮೇಲೆ ಕ್ರಮಕ್ಕೆ ಮೀನಮೇಷ ಎಣಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ವಾರ ಸುದ್ದಿಗೋಷ್ಠಿಗೂ ಮುನ್ನ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಸಮನ್ವಯಕಾರ ಎಂ ಎ ಸಲೀಂ ನಡುವಿನ ಸಂಭಾಷಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿರುವ ಕಾಂಗ್ರೆಸ್ ಶಿಸ್ತು ಸಮಿತಿ, ಸಲೀಂ ಅವರನ್ನು ಆರು ವರ್ಷ ಅವಧಿಗೆ ಉಚ್ಛಾಟಿಸಿದೆ. ಅತ್ಯಂತ ತ್ವರಿತವಾಗಿ ಸ್ಪಂದಿಸಿದ ಸಮಿತಿ ಇದೇ ಸಂದರ್ಭದಲ್ಲಿ ವಿ.ಎಸ್. ಉಗ್ರಪ್ಪ ಅವರಿಗೂ ಮೂರು ದಿನದಲ್ಲಿ ಸಮಿತಿ ಮುಂದೆ ಆಗಮಿಸಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.
ಆದರೆ, ಈವರೆಗೂ ಉಗ್ರಪ್ಪ ಸಮಿತಿ ಮುಂದೆ ಹಾಜರಾಗಿರುವ ಬಗ್ಗೆ ಅಧಿಕೃತ ಮಾಹಿತಿ ಪಕ್ಷದ ಕಡೆಯಿಂದ ಹೊರ ಬಿದ್ದಿಲ್ಲ. ಹಬ್ಬದ ಹಾಗೂ ರಜೆಯ ನೆಪವೊಡ್ಡಿ ಈವರೆಗೂ ವಿಚಾರಣೆ ನಡೆದಿಲ್ಲ ಎಂಬ ಮಾಹಿತಿ ಇದೆ. ವಿಚಾರಣೆ ನಡೆದಿರುವ ಬಗ್ಗೆ ಕಾಂಗ್ರೆಸ್ ಪಕ್ಷವಾಗಲಿ, ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆಗಲಿ, ಖುದ್ದು ಉಗ್ರಪ್ಪ ಆಗಲಿ ಮಾಹಿತಿ ನೀಡಿಲ್ಲ.
ಈ ಮಧ್ಯೆ ಕಾಂಗ್ರೆಸ್ ನಾಯಕರು ಕೇವಲ ಸಲೀಂ ವಿರುದ್ಧ ಕ್ರಮಕ್ಕಷ್ಟೇ ಶಕ್ತರಾಗಿದ್ದಾರೆ. ದೊಡ್ಡ ನಾಯಕರ ವಿರುದ್ಧ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಗಟ್ಟಿ ದನಿಯಲ್ಲಿ ತಾಕೀತು ಮಾಡುವ ಕಾರ್ಯವೂ ಆಗಿಲ್ಲ ಎಂದು ಕಾಂಗ್ರೆಸ್ನ ಕೆಲ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಮಾಜಿ ಸಚಿವ ಜಮೀರ್ ಅಹಮದ್, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ವಿರುದ್ಧ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಂತಹ ಬೆಳವಣಿಗೆ ನಡೆಯಲೇ ಇಲ್ಲ.
ಸಣ್ಣವರ ಮೇಲೆ ಮಾತ್ರ ಕ್ರಮ : ಕಾಂಗ್ರೆಸ್ ಶಿಸ್ತು ಸಮಿತಿ ಇದುವರೆಗೂ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಮಾತ್ರ ಕ್ರಮಕೈಗೊಂಡಿದೆಯೇ ಹೊರತು ದೊಡ್ಡ ನಾಯಕರನ್ನು ಮುಟ್ಟುವ ಸಾಹಸ ಮಾಡಿಲ್ಲ. ಇದೀಗ ಉಗ್ರಪ್ಪ ವಿಚಾರದಲ್ಲಿಯೂ ಇದೇ ಸ್ಥಿತಿ ಮರುಕಳಿಸಲಿದೆ ಎಂಬ ಮಾಹಿತಿ ಇದೆ.
ಯಾಕೆಂದರೆ, ಉಗ್ರಪ್ಪ ತುಂಬಾ ಹಿರಿಯ ನಾಯಕರು, ಅಲ್ಲದೇ ಕಾಂಗ್ರೆಸ್ ಪಕ್ಷದ ಹಲವು ಹುದ್ದೆಗಳನ್ನು ಅನುಭವಿಸಿದವರು. ಇದೀಗ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ ಹಿಂದಿನವರ ತಪ್ಪುಗಳನ್ನು ಮರೆತಿದ್ದು ನೆನಪಾಗಲಿದೆ. ಇದರಿಂದ ಉಗ್ರಪ್ಪ ವಿರುದ್ಧ ಯಾವುದೇ ಕ್ರಮ ಆಗವುದಿಲ್ಲ. ಕೇವಲ ಬಾಯಿ ಮಾತಿನ ವಿಚಾರಣೆ ಮಾತ್ರ ನಡೆಯಲಿದೆ ಎನ್ನಲಾಗುತ್ತಿದೆ.
ಸಲೀಂ ಉಚ್ಚಾಟನೆ ಮೂಲಕ ಪಕ್ಷದ ನಾಯಕರಿಗೆ ಒಂದು ಗಟ್ಟಿ ಸಂದೇಶ ರವಾನೆ ಆಗಿದೆ. ಇನ್ನು, ಉಗ್ರಪ್ಪ ವಿಚಾರಣೆ ನಡೆಸಿ ಅಲ್ಲಿಗೇ ಕೈಬಿಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ. ಪಕ್ಷದ ಕಚೇರಿಗೆ ಉಗ್ರಪ್ಪ ಬರುವುದನ್ನು ತಡೆಯುವುದು, ನಿಧಾನವಾಗಿ ಅವರನ್ನು ಪಕ್ಷದಲ್ಲಿ ನಿರ್ಲಕ್ಷಿಸುವ ಮೂಲಕ ತಂತಾನೇ ಅವರು ಪಕ್ಷದ ಚಟುವಟಿಕೆಯಿಂದ ದೂರವಾಗುವಂತೆ ಮಾಡುವ ಯತ್ನ ನಡೆಯಲಿದೆ ಎಂಬ ಮಾಹಿತಿ ಇದೆ.
ಮತ್ತೆ ಬಂದಿಲ್ಲ : ಕಳೆದ ವಾರ ಉಗ್ರಪ್ಪ ಸುದ್ದಿಗೋಷ್ಠಿಗೂ ಮುನ್ನ ಸಲೀಂ ಜತೆ ನಡೆಸಿದ ಸಂಭಾಷಣೆ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತು ಮತ್ತೊಂದು ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಲು ಹರಸಾಹಸ ಪಟ್ಟ ಉಗ್ರಪ್ಪ, ಪಕ್ಷದ ಕಚೇರಿಗೆ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮಿಸುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಂದ ತೆರಳಿದ್ದರು. ಇದಾದ ಬಳಿಕ ಎಲ್ಲಿಯೂ ಅಧ್ಯಕ್ಷರನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ.
ಅಲ್ಲದೇ ಕಳೆದ ಮೂರು ದಿನದಿಂದ ಅವರು ಪಕ್ಷದ ಕಚೇರಿಯತ್ತ ಮುಖ ಮಾಡಿಲ್ಲ. ಈಗಾಗಲೇ ಪಕ್ಷದ ಕಚೇರಿಯಲ್ಲಿ ತಮ್ಮ ಮೇಲಿನ ಗೌರವ ಕಳೆದುಕೊಂಡಿರುವ ವಿ.ಎಸ್. ಉಗ್ರಪ್ಪ, ಪಕ್ಷದ ಇತರೆ ಕೆಲ ನಾಯಕರು, ಮಾಜಿ ಸಚಿವರ ಮಾದರಿಯಲ್ಲೇ ನಿಧಾನವಾಗಿ ಪಕ್ಷದ ಚಟುವಟಿಕೆಯಿಂದ ತೆರೆಮರೆಗೆ ಸರಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೊಂದು ತಿಂಗಳಲ್ಲಿ ಜನರು ಸಹ ಈ ಘಟನೆ ಮರೆತು ಬಿಡುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಿಗಿದೆ.
ಇನ್ನೊಂದೆಡೆ ಪಕ್ಷದ ರಾಜ್ಯ ನಾಯಕರು ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನ ಪರಿಷತ್ಗೆ ನಡೆಯುವ ಚುನಾವಣೆ ಪ್ರಚಾರದಲ್ಲಿ ಮುಂದಿನ ದಿನಗಳಲ್ಲಿ ತೊಡಗಿಕೊಳ್ಳುವುದರಿಂದ ನಿಧಾನವಾಗಿ ಈ ಪ್ರಕರಣ ಮರೆಯಾಗಲಿದೆ. ಅಲ್ಲಿಗೆ ವಿಚಾರಣೆ ಬಗೆಗೂ ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.