ETV Bharat / state

ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಾಯಕರ‌ ಪಟ್ಟಿ ತಮಗೆ ಮೊದಲೇ ಸಲ್ಲಿಸುವಂತೆ ಹೈಕಮಾಂಡ್ ಸೂಚನೆ? - ಈಟಿವಿ ಭಾರತ ಕನ್ನಡ

ಚುನಾವಣಾ ವರ್ಷದಲ್ಲಿ ಪಕ್ಷಗಳಿಂದ ಅಭ್ಯರ್ಥಿಗಳು ಕಪ್ಪೆ ಜಿಗಿತ ಮಾಡುವುದು ಸಮಾನ್ಯ ಬೆಳವಣಿಗೆ. ಈ ಬಗ್ಗೆ ನಿಗಾ ವಹಿಸಲು ಕಾಂಗ್ರೆಸ್​ ಚಿಂತನೆ ನಡೆಸಿದೆ. ಪಕ್ಷ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಮಾತ್ರ ಮಣೆ ಹಾಕಲು ನಿರ್ಧರಿಸಿದೆ.

Congress High Command orders
ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಾಯಕರ‌ ಪಟ್ಟಿ ತಮಗೆ ಮೊದಲೇ ಸಲ್ಲಿಸುವಂತೆ ಹೈಕಮಾಂಡ್ ಸೂಚನೆ?!
author img

By

Published : Oct 9, 2022, 5:46 PM IST

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲುವನ್ನು ಪ್ರಮುಖ ಆದ್ಯತೆಯಾಗಿಸಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಮುಂಬರುವ ದಿನಗಳಲ್ಲಿ ಪಕ್ಷ ಸೇರಲು ಮುಂದಾಗುವ ನಾಯಕರ ಪಟ್ಟಿಯನ್ನು ತಮಗೆ ಮೊದಲೇ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಿದೆ ಎನ್ನಲಾಗ್ತಿದೆ.

ಚುನಾವಣೆ ಸಮೀಪಿಸಿದ ಸಂದರ್ಭದಲ್ಲಿ ವಿವಿಧ ಪಕ್ಷಗಳಲ್ಲಿ ಅತೃಪ್ತಿ ಹೊಂದಿದ ಅಭ್ಯರ್ಥಿಗಳು, ಪಕ್ಷದಲ್ಲಿ ಬೇರೊಬ್ಬರ ಸೇರ್ಪಡೆಯಿಂದ ಸೋಲುವ ಮಟ್ಟಕ್ಕೆ ಉಂಟಾಗಬಹುದಾದ ಬಂಡಾಯ, ಕಾಂಗ್ರೆಸ್ ಸೋಲಲಿ ಎಂಬ ಉದ್ದೇಶದಿಂದಲೇ ಬೇರೆ ಪಕ್ಷದಿಂದ ಪ್ರೇರಿತರಾಗಿ ಸೇರ್ಪಡೆಗೊಳ್ಳುವವರು ಹಾಗೂ ಒಬ್ಬ ವ್ಯಕ್ತಿಯ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭ ಇಲ್ಲ ಎನ್ನುವಂತ ಸ್ಥಿತಿ ಇದ್ದರೆ ಆ ಸಂದರ್ಭ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ನಿರ್ಧಾರ ಕೈಗೊಳ್ಳಲು ಪಕ್ಷ ತೀರ್ಮಾನಿಸಿದೆ.

ಪ್ರಸ್ತುತ ಕರ್ನಾಟಕದಲ್ಲಿ ಚುನಾವಣೆ ಸಂಬಂಧ ಚಟುವಟಿಕೆಗಳು ಆರಂಭವಾಗಿದ್ದು, ನಿಧಾನವಾಗಿ ಕೆಲವರು ಪಕ್ಷ ಸೇರ್ಪಡೆ ಆಗಿದ್ದಾರೆ. ಚುನಾವಣೆಗೆ ವರ್ಷ ಮುನ್ನ ಸೇರ್ಪಡೆಯಾಗುವವರ ಬಗ್ಗೆ ಅಷ್ಟೇನೂ ಆತಂಕ ಇರದು. ಸೇರ್ಪಡೆಯಾಗುವ ನಾಯಕರ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಒಮ್ಮತ ಮೂಡಿಸಲು ಕಾಲಾವಕಾಶ ಇರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಹಾಗೂ ಕಡೆಯ ಕ್ಷಣಗಳಲ್ಲಿ ಪಕ್ಷ ಸೇರ್ಪಡೆಯಾಗುವ ನಾಯಕರ ಕುರಿತು ಆಯಾ ಭಾಗದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ವಿಸ್ತೃತವಾಗಿ ಚರ್ಚಿಸಿ ಮನವೊಲಿಸಲು ಅವಕಾಶ ಕಡಿಮೆ ಇರುತ್ತದೆ. ಜೊತೆಗೆ ಸೇರ್ಪಡೆಯಾಗುವ ಅಭ್ಯರ್ಥಿಯ ಹಿನ್ನೆಲೆ ಸಹ ಪರಿಶೀಲಿಸುವುದು ಕಷ್ಟ ಸಾಧ್ಯವಾಗಿರುತ್ತದೆ.

ಪಕ್ಷ ಸಿದ್ಧಾಂತ ಒಪ್ಪಿದವರಿಗೆ ಅವಕಾಶ : ಆದ್ದರಿಂದ ರಾಜ್ಯ ನಾಯಕರ ಸಂಪರ್ಕದಲ್ಲಿದ್ದು ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಬಯಸುವ ಇತರೆ ಪಕ್ಷಗಳ ಮುಖಂಡರನ್ನು ಚುನಾವಣೆಗೆ ಆರು ತಿಂಗಳು ಮುನ್ನವೇ ಹೈಕಮಾಂಡ್ ನಾಯಕರ ಗಮನಕ್ಕೆ ತಂದು, ಇಂಥವರನ್ನ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಖಚಿತಪಡಿಸಬೇಕು. ಸೇರ್ಪಡೆಯಾಗುವ ಅಭ್ಯರ್ಥಿಯೇ ಖುದ್ದು ಹೈಕಮಾಂಡ್ ನಾಯಕರಿಗೆ ತಮ್ಮ ಸೇರ್ಪಡೆಯನ್ನು ಖಚಿತ ಪಡಿಸಬೇಕು. ಇದೆಲ್ಲದರ ಜೊತೆಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಅವರು ಮುನ್ನಡೆಯುವ ರೀತಿಯಲ್ಲಿ ಇರಬೇಕು.

ಪಕ್ಷವನ್ನು ಅಧಿಕಾರಕ್ಕೆ ತರುವುದು ಮಾತ್ರ ಮುಖ್ಯವಲ್ಲ, ನಮ್ಮ ತತ್ವ ಸಿದ್ಧಾಂತವನ್ನು ಬರುವವರೆಗೂ ಮನವರಿಕೆ ಮಾಡಿ ಅವರಲ್ಲಿ ಅಳವಡಿಸುವ ಕಾರ್ಯವನ್ನು ಸಹ ರಾಜ್ಯ ಕಾಂಗ್ರೆಸ್ ನಾಯಕರು ಮಾಡಬೇಕು. ಕೇವಲ ತಾವಿರುವ ಪಕ್ಷದ ಮೇಲಿನ ಅಸಮಾಧಾನಕ್ಕೆ ಇಲ್ಲವೇ ಕಾಂಗ್ರೆಸ್ ಸೇರಬೇಕೆಂಬ ಆತುರಕ್ಕೆ ಬರುವವರನ್ನು ಕೂಡಲೇ ಪರಿಗಣಿಸಬೇಡಿ. ಪಕ್ಷ ಸೇರ್ಪಡೆ ಆಸಕ್ತಿ ವ್ಯಕ್ತಪಡಿಸುವ ಅಭ್ಯರ್ಥಿಯ ಸಂಪೂರ್ಣ ಮಾಹಿತಿಯನ್ನು ಆಯಾ ತಾಲೂಕು ಇಲ್ಲವೇ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರಿಂದ ಪರಿಶೀಲಿಸಿ ನಂತರವೇ ನಿರ್ಧರಿಸಿ.

ನಾಯಕರೇ ಹೊಣೆಗಾರರು : ಕಾಂಗ್ರೆಸ್ ಸೇರ್ಪಡೆಯಾಗಲು ಬಯಸುವ ಮುಖಂಡರ ಹಿನ್ನೆಲೆಯನ್ನು ಕೂಲಂಕಶವಾಗಿ ಅಧ್ಯಯನ ನಡೆಸಿ ಮೂರ್ನಾಲ್ಕು ಸಾರಿ ಅವರೊಂದಿಗೆ ಸಮಾಲೋಚಿಸಿ ನಂತರವೇ ಹೈಕಮಾಂಡ್ ನಾಯಕರ ಗಮನಕ್ಕೆ ತನ್ನಿ. ಸೇರ್ಪಡೆ ವಿಚಾರದಲ್ಲಿ ಸಹ ಹೈಕಮಾಂಡ್ ತೀರ್ಮಾನವೆ ಅಂತಿಮವಾಗಿದ್ದು ತಮ್ಮ ಗಮನಕ್ಕೆ ತರದೆ ಯಾರನ್ನು ಸೇರ್ಪಡೆ ಮಾಡಿಕೊಳ್ಳುವಂತಿಲ್ಲ. ಒಂದೊಮ್ಮೆ ಈ ರೀತಿ ಸೇರ್ಪಡೆ ಮಾಡಿಕೊಂಡರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳಿಗೆ ಪಕ್ಷ ಸೇರ್ಪಡೆ ಮಾಡಿಕೊಂಡ ನಾಯಕರೆ ಹೊಣೆಯಾಗುತ್ತಾರೆ ಎಂದು ಅತ್ಯಂತ ಸ್ಪಷ್ಟವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈ ಕಮಾಂಡ್ ನಾಯಕರು ಸೂಚಿಸಿದ್ದಾರೆ.

ಸದ್ಯ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದು ಇದು ಮುಕ್ತಾಯವಾದ ಒಳಿಕ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೈಗೊಳ್ಳಬಹುದಾದ ಸಿದ್ಧತೆಗಳ ಕುರಿತು ಹೈಕಮಾಂಡ್ ಗಮನಹರಿಸಲಿದೆ. ಅಲ್ಲಿಯವರೆಗೂ ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ಸೇರ್ಪಡೆಗೆ ಮುಂದಾಗದೆ ತಾಳ್ಮೆಯಿಂದ ತಾವು ನೀಡುವ ಸೂಚನೆಗೆ ಕಾಯುವಂತೆ ಸ್ವತಃ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ 7ರಿಂದ ಭಾರತ ಜೋಡೋ ಪಾದಯಾತ್ರೆಯನ್ನು ಕನ್ಯಾಕುಮಾರಿಯಿಂದ ಆರಂಭಿಸಿರುವ ಅವರು ಒಂದು ತಿಂಗಳು ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಸದ್ಯ ತುಮಕೂರು ಜಿಲ್ಲೆಯಲ್ಲಿ ಪಾದಯಾತ್ರೆ ಮುಂದುವರಿದಿದ್ದು ಮೈಸೂರಿನಲ್ಲಿ ಎರಡು ದಿನ ದಸರಾ ಹಬ್ಬದ ಸಂದರ್ಭ ವಿಶ್ರಾಂತಿ ಪಡೆದ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಜೊತೆ ಚರ್ಚೆ ನಡೆಸಿರುವ ಅವರು ಈ ಮೇಲಿನ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಹೈಕಮಾಂಡ್ ಒಪ್ಪಿದ ಮೇಲೆಯೇ ಸೇರ್ಪಡೆ : ಚುನಾವಣೆಗೆ ವರ್ಷವಿರುವಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗಲು ಸಾಕಷ್ಟು ಆಕಾಂಕ್ಷಿಗಳು ಉತ್ಸಾಹ ತೋರಿಸುತ್ತಿದ್ದಾರೆ. ಇವರಲ್ಲಿ ಸಾಕಷ್ಟು ಮಂದಿ ಹಾಲಿ ಹಾಗೂ ಮಾಜಿ ಶಾಸಕರು ಸಚಿವರುಗಳು ಇದ್ದಾರೆ. ಆದರೆ ಹೈಕಮಾಂಡ್ ಸಮ್ಮತಿ ಇಲ್ಲದೆ ಯಾರನ್ನು ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಈಗಾಗಲೇ ರಾಜ್ಯ ನಾಯಕರದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪಕ್ಷದ ಹೈಕಮಾಂಡ್ ನಾಯಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಸೇರ್ಪಡೆಯಾಗುವ ಮುಖಂಡರ ಮಾಹಿತಿ ಒದಗಿಸಿದ್ದಾರೆ.

ಹೈಕಮಾಂಡ್ ನಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಒಂದಿಷ್ಟು ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಜೊತೆ ಮುಂಬರುವ ದಿನಗಳಲ್ಲಿ ಕೇಂದ್ರಕ್ಕೂ ಹೆಚ್ಚು ಸಂಸದರನ್ನ ಕಳಿಸಿಕೊಡುವ ನಿಟ್ಟಿನಲ್ಲಿ ಪಕ್ಷಕ್ಕೆ ಬಲ ತುಂಬುವ ನಾಯಕರನ್ನು ಸೇರ್ಪಡೆ ಮಾಡಿಕೊಳ್ಳಲಿದ್ದೇವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ : ರಾಹುಲ್ ಪಾದಯಾತ್ರೆ ಎಫೆಕ್ಟ್: ಬಿಜೆಪಿಯಲ್ಲಿ ಬಿರುಸುಗೊಂಡ ತಂತ್ರಗಾರಿಕೆ ಪ್ರಯೋಗ, ಕಾಂಗ್ರೆಸ್​​ಗೆ ಶಾಕ್​ ಮೇಲೆ ಶಾಕ್

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.