ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕ ವಿವಾಹವಾಗುವುದಾಗಿ ನಂಬಿಸಿದ ಯುವಕನೋರ್ವ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಯುವತಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ತನಗೆ ನಂಬಿಸಿದ್ದ ಯುವಕ ತನ್ನನ್ನು ರೂಂಗೆ ಕರೆದೊಯ್ದು ತಂಪು ಪಾನೀಯದಲ್ಲಿ ಮತ್ತೇರಿಸುವ ಔಷಧಿ ಬೆರೆಸಿ ಖಾಸಗಿ ಫೋಟೊ, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ಯುವತಿ ದೂರಿದ್ದಾಳೆ.
ಬನಶಂಕರಿಯ 3ನೇ ಹಂತದ ನಿವಾಸಿ 21 ವರ್ಷದ ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಚಿರಾಗ್, ಹರ್ಷಿತ್ ಎಂಬುವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ಪರಿಚಯ:
2020ರ ಸೆ.5ರಂದು ಇನ್‌ಸ್ಟಾಗ್ರಾಂ ಮೂಲಕ ಯುವತಿಗೆ ಚಿರಾಗ್ ಪರಿಚಯವಾಗಿದ್ದ. ನಂತರ ಇಬ್ಬರೂ ಚಾಟ್ ಮಾಡುತ್ತ ಸ್ನೇಹಿತರಾಗಿದ್ದರು. ಯುವತಿಯ ಮೊಬೈಲ್ ನಂಬರ್ ಪಡೆದ ಆರೋಪಿ ಚಿರಾಗ್ ಪ್ರತಿನಿತ್ಯ ಆಕೆಯೊಂದಿಗೆ ಮಾತನಾಡುತ್ತಿದ್ದ. ಸೆ.26ರಂದು ಪಾಲಕರನ್ನು ಪರಿಚಯಿಸುವುದಾಗಿ ಯುವತಿಯನ್ನು ಮೈಸೂರಿಗೆ ಕರೆದುಕೊಂಡು ಬಂದು ಲಾಡ್ಜ್‌ವೊಂದಕ್ಕೆ ಕರೆದೊಯ್ದಿದ್ದ.
ನಂತರ ಲಾಡ್ಜ್ನಲ್ಲಿ ತಂಪು ಪಾನೀಯಕ್ಕೆ ಮತ್ತುಬರುವ ಔಷಧ ಹಾಕಿ ಯುವತಿಗೆ ಕೊಟ್ಟಿದ್ದಾನೆ. ಇದನ್ನು ಸೇವಿಸಿದ ಕೆಲ ಕ್ಷಣಗಳಲ್ಲೇ ಯುವತಿ ಪ್ರಜ್ಞೆ ತಪ್ಪಿದಾಗ ಆರೋಪಿ ಚಿರಾಗ್ ಹಾಗೂ ಆತನ ಸ್ನೇಹಿತ ಹರ್ಷಿತ್ ಜತೆ ಸೇರಿ ಯುವತಿಯನ್ನು ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ಖಾಸಗಿ ಫೋಟೊ, ವಿಡಿಯೋ ಸೆರೆಹಿಡಿದಿದ್ದಾರೆ. ಯುವತಿಗೆ ಪ್ರಜ್ಞೆ ಬಂದಾಗ ಆರೋಪಿಗಳು ಮೊಬೈಲ್‌ನಲ್ಲಿ ಸೆರೆಹಿಡಿದ ಫೋಟೊ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು.
5 ಲಕ್ಷ ರೂ. ಪೀಕಿದ ಆರೋಪಿಗಳು:
ತಾವು ಕೇಳಿದಾಗಲೆಲ್ಲಾ ಹಣ ಕೊಡಬೇಕು. ಇಲ್ಲವಾದರೆ ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇವೆ ಎಂದು ಆರೋಪಿಗಳು ಬೆದರಿಸಿದ್ದಾರೆ. ಇದರಿಂದ ಆತಂಕಗೊಂಡ ಯುವತಿ 5 ಲಕ್ಷ ರೂ.ನ್ನು ಆರೋಪಿಗಳಿಗೆ ಕೊಟ್ಟಿದ್ದೇನೆ. ನಂತರವೂ ಕೂಡ ಆ.28ರಂದು ಬಲವಂತವಾಗಿ ಮೆಜೆಸ್ಟಿಕ್‌ನ ಲಾಡ್ಜ್‌ವೊಂದಕ್ಕೆ ಕರೆದುಕೊಂಡು ಹೋಗಿ ರೂಂನಲ್ಲಿ ಕೂಡಿ ಹಾಕಿ ಹಣ ಕೊಡುವಂತೆ ಬೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಹೆಂಡತಿ, ಸಂಬಂಧಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ