ಬೆಂಗಳೂರು : ಇಂದು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಬೆಂಗಳೂರಿನ ಪಿಯು ಬೋರ್ಡ್ ನಲ್ಲಿ, ಮಾಧ್ಯಮಗೋಷ್ಟಿ ನಡೆಸಿ ಫಲಿತಾಂಶವನ್ನ ಪ್ರಕಟಿಸಿದ್ದಾರೆ. ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ್ ವಿಜಯ್, ನೀಲ್ ಸಿಂಗ್, ಆಕಾಶ್ ದಾಸ್ ಹಾಗು ನೇಹಾ 600 ಅಂಕಗಳಿಗೆ 596 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಅಗ್ರಸ್ಥಾನದಲ್ಲಿದ್ದಾರೆ. ಈ ನಾಲ್ಕು ಜನ ಟಾಪರ್ ವಿದ್ಯಾರ್ಥಿಗಳಲ್ಲಿ, ಬೆಂಗಳೂರಿನ ಹುಡುಗ ಮಾನವ್ ವಿಜಯ್ ಕೇಜರಿವಾಲ್ ಹಾಗು ದೇವನಹಳ್ಳಿಯ ನೇಹಾ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ತಮ್ಮ ಈ ಸಾಧನೆ ಬಗ್ಗೆ 'ಈಟಿವಿ ಭಾರತ'ದೊಂದಿಗೆ ತಮ್ಮ ಸಂತೋಷವನ್ನು ಟಾಪರ್ ಮಾನವ್ ವಿಜಯ್ ಕೇಜರಿವಾಲ್ ಹಂಚಿಕೊಂಡಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ. ನನಗೆ ಇಷ್ಟೊಂದು ಅಂಕಗಳು ಬರುತ್ತವೆ ಎಂದು ಅಂದುಕೊಂಡಿರಲಿಲ್ಲ. ನಮ್ಮ ಶಾಲೆಯ ಅಧ್ಯಾಪಕರು, ಅಪ್ಪ-ಅಮ್ಮನ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ವಿನಯ್ ಕೇಜರಿವಾಲ್ ಹಾಗು ಮಾಧುರಿ ದಂಪತಿಯ ಮಗನಾಗಿರೋ ಮಾನವ್ ವಿಜಯ್ ಕೇಜರಿವಾಲ್ ಜೆ.ಪಿ ನಗರದ ಜೈನ್ ಕಾಲೇಜ್ ನಲ್ಲಿ ಓದುತ್ತಿದ್ದರು.
ದೇವನಹಳ್ಳಿ ನಿವಾಸಿ ನೇಹಾ ಕೂಡ ಪಿಯುಸಿಯಲ್ಲಿ 600 ಅಂಕಕ್ಕೆ 596 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಮಾತಾನಾಡಿರುವ ಅವರು, ಮುಂಜಾನೆ 3 ಗಂಟೆಯಿಂದ 6.30 ವರೆಗೆ ಓದುತ್ತಿದ್ದೆ. ಹೀಗಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಹೆಚ್ಚು ಅಂಕ ಗಳಿಸಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ರಾಮಸ್ವಾಮಿ ಹಾಗೂ ಅನ್ನಪೂರ್ಣ ದಂಪತಿಯ ಪುತ್ರಿಯಾಗಿರುವ ನೇಹಾ ಚಿಕ್ಕಬಳ್ಳಾಪುರ ಬಿಜಿಎಸ್ ಕಾಲೇಜಿನಲ್ಲಿ ಓದುತ್ತಿದ್ದರು. ಅಪ್ಪ-ಅಮ್ಮನ ಆಸೆಯಂತೆ ಇವರು ಚಾರ್ಟೆಡ್ ಅಕೌಂಟೆಂಟ್ ಆಗುವ ಕನಸು ಕಂಡಿದ್ದಾರೆ.
ಓದಿ :ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಜೂನ್ ಕೊನೆಯಲ್ಲಿ ಪ್ರಕಟ : ಸಚಿವ ನಾಗೇಶ್