ಬೆಂಗಳೂರು: ಗೋವಿನ ಸಂತತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಪುಣ್ಯಕೋಟಿ’ ದತ್ತು ಯೋಜನೆಗೆ ವಿವಿಧ ವೃಂದದ ಸರ್ಕಾರಿ ನೌಕರರು, ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸ್ವಾಯತ್ತ ಸಂಸ್ಥೆಗಳ ನೌಕರರಿಂದ ಒಂದು ಬಾರಿಗೆ ಮಾತ್ರ ನಿರ್ದಿಷ್ಟ ಮೊತ್ತವನ್ನು ವೇತನದಿಂದ ಕಡಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.
ಈ ಯೋಜನೆಗೆ ವಂತಿಗೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿಗೆ ಸಕಾರಾತ್ಮಕವಾಗಿ ‘ರಾಜ್ಯ ಸರ್ಕಾರಿ ನೌಕರರ ಸಂಘ’ ಸ್ಪಂದಿಸಿದ್ದು ಸರ್ಕಾರ ಬುಧವಾರ ಈ ಆದೇಶ ಹೊರಡಿಸಿದೆ.
ಡಿ ವೃಂದದ ನೌಕರರಿಗೆ ವಿನಾಯಿತಿ: ಆದೇಶದ ಪ್ರಕಾರ, ‘ಎ’ ವೃಂದದ ಅಧಿಕಾರಿಗಳಿಗೆ 11,000 ರೂ., ‘ಬಿ’ವೃಂದದ ಅಧಿಕಾರಿಗಳಿಗೆ 4,000 ರೂ., ‘ಸಿ’ ವೃಂದದ ನೌಕರರಿಗೆ 400 ರೂ.ಗಳನ್ನು ನವೆಂಬರ್ ತಿಂಗಳ ವೇತನದಿಂದ ಕಡಿತ ಮಾಡುವಂತೆ ಆರ್ಥಿಕ ಇಲಾಖೆ ಸೂಚಿಸಿದೆ. ಆದರೆ ವಂತಿಗೆ ಕಡಿತದಿಂದ ‘ಡಿ’ ವೃಂದದ ನೌಕರರಿಗೆ ವಿನಾಯಿತಿ ನೀಡಲಾಗಿದೆ. ನೌಕರರ ವೇತನದಿಂದ ವಂತಿಗೆ ಕಡಿತ ಮಾಡುವುದರಿಂದ ಒಟ್ಟಾರೆ ಸುಮಾರು 80 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.
ವೇತನದಿಂದ ನಿಗದಿತ ವಂತಿಗೆಯನ್ನು ಕೊಡಲಿಚ್ಛಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಲಿಖಿತ ಮೂಲಕ ನ. 25 ರೊಳಗೆ ಸಲ್ಲಿಸಬೇಕು. ಈ ರೀತಿ ಪತ್ರ ನೀಡಿದ ನೌಕರರ ವೇತನದಿಂದ ವಂತಿಗೆ ಕಡಿತ ಮಾಡದಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪಶು ಸಂಗೋಪನಾ ಇಲಾಖೆಗೆ ಜಮೆ: ನೌಕರರಿಂದ ಸಂಗ್ರಹವಾದ ಎಲ್ಲ ಮೊತ್ತಗಳು ಅಂತಿಮವಾಗಿ ಪುಣ್ಯಕೋಟಿ ದತ್ತು ಯೋಜನೆ ಜಾರಿ ಮಾಡುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಕ್ಷಮ ಪ್ರಾಧಿಕಾರಿ ಖಾತೆಗೆ ಜಮೆ ಆಗಲಿದೆ. ಈ ವರ್ಷದ ಆಯವ್ಯಯ ಭಾಷಣದಲ್ಲಿ ಘೋಷಿಸಿದ ‘ಪುಣ್ಯಕೋಟಿ’ ದತ್ತು ಯೋಜನೆಗೆ ಸರ್ಕಾರಿ ನೌಕರರು ವಂತಿಗೆ ನೀಡುವ ಮೂಲಕ ಸಹಕರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಕಳೆದ ಅಕ್ಟೋಬರ್ 14 ರಂದು ಪತ್ರ ಬರೆದು ವಂತಿಗೆ ಕಡಿತ ಮಾಡುವಂತೆ ಪತ್ರ ಬರೆದಿತ್ತು.
ಇದನ್ನೂ ಓದಿ: ಪುಣ್ಯಕೋಟಿ ದತ್ತು ಯೋಜನೆಗೆ 100 ಕೋಟಿ ದೇಣಿಗೆ ಕೊಟ್ಟ ರಾಜ್ಯ ಸರ್ಕಾರಿ ನೌಕರರು
ವಂತಿಗೆ ಕಡಿತ ಮಾಡುವ ಮುನ್ನ ಎಲ್ಲ ವೃಂದದ ಅಧಿಕಾರಿಗಳು ಹಾಗೂ ನೌಕರರ ಸಂಘದವರ ಜೊತೆ ಮಾತುಕತೆ ನಡೆಸಿ ವಂತಿಗೆ ಕಡಿತಕ್ಕೆ ಒಪ್ಪಿಗೆ ಪಡೆಯಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಸಹ 7 ನೇ ವೇತನ ಆಯೋಗ ರಚಿಸಿ ಮುಂಬರುವ ಆಯವ್ಯಯದಲ್ಲಿ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರದ ಒಳ್ಳೆಯ ಯೋಜನೆಗೆ ಕೈ ಜೋಡಿಸಲು ವಂತಿಗೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.