ಬೆಂಗಳೂರು: ಕೆಲ ಅತೃಪ್ತ ಶಾಸಕರು ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರೇಣುಕಾಚಾರ್ಯ, ಯತ್ನಾಳ್, ಹೆಚ್. ವಿಶ್ವನಾಥ್ ಹಾಗೂ ಮಂತ್ರಿ ಸ್ಥಾನ ಕಳೆದುಕೊಂಡಿದ್ದಕ್ಕೆ ನಾಗೇಶ್ ಅತೃಪ್ತಿ ವ್ಯಕ್ತಪಡಿಸಿದ ಬೆನ್ನಲ್ಲೆ, ರೇಣುಕಾಚಾರ್ಯ ಹಾಗೂ ನಾಗೇಶ್ ಮನವೊಲಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ. ಹೆಚ್. ನಾಗೇಶ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಾದಿ ನೀಡಿ ಸಮಾಧಾನಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: 'ನಾನೇನು ರೆಡಿಮೇಡ್ ಎಂಟಿಆರ್ ಫುಡ್ಸ್ ಅಲ್ಲ, ಹೋರಾಟದ ಮೂಲಕ ಶಾಸಕನಾದವನು: ರೇಣುಕಾ ಗರಂ
ಇನ್ನೂ ಕೆಲ ಶಾಸಕರು ಅತೃಪ್ತಿ ವ್ಯಕ್ತಪಡಿಸಲು ಮುಂದುವರಿಸಿದ ಬೆನ್ನಲ್ಲೆ ನಮ್ಮ ಯಾವುದೇ ಶಾಸಕರು ವಿರೋಧ ಇದ್ದರೆ ದೆಹಲಿಗೆ ಹೋಗಲಿ. ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ಕೊಡಲಿ. ಇಲ್ಲಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡುವುದು ಬೇಡ ಎಂದು ಸಿಎಂ ಬಿಎಸ್‌ವೈ ತಿಳಿಸಿದರು. ಸಂಪುಟ ವಿಸ್ತರಣೆಯಿಂದ ಅಸಮಾಧಾನ ಇರುವ ಶಾಸಕರು ಹಗುರವಾಗಿ ಮಾತಾಡೋದು ಬೇಡ. ಅಸಮಾಧಾನ ಇದ್ದವರು ದೆಹಲಿಗೆ ಹೋಗಿ ವರಿಷ್ಠರ ಜತೆ ಮಾತನಾಡಲಿ. ಇದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ ಎಂದು ಸಿಎಂ ಖಡಕ್ ಆಗಿಯೇ ಅತೃಪ್ತ ಶಾಸಕರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಸಿಎಂ ಬಿಎಸ್‌ವೈ ಸ್ವಜಾತಿ ಪ್ರೇಮ.. ಕ್ಯಾಬಿನೆಟ್‌ನಲ್ಲಿ 11 ಲಿಂಗಾಯತರಿಗೆ ಸಚಿವಗಿರಿ.. ಸರ್ವರಿಗಿಲ್ಲ ಸಮಪಾಲು!!
ನಿನ್ನೆಯಷ್ಟೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದ ರೇಣುಕಾಚಾರ್ಯ ಇಂದು ಬೆಳಗ್ಗೆ ದೂರು ಹೊತ್ತು ದೆಹಲಿಗೆ ತೆರಳಿದ್ದಾರೆ. ರೇಣುಕಾಚಾರ್ಯ ದೆಹಲಿಗೆ ತೆರಳುತ್ತಿದ್ದಂತೆ ಇನ್ನು ಯಾರಾದರೂ ಅಸಮಾಧಾನಿತರಿದ್ದರೆ ಅವರೂ ಕೂಡ ದೆಹಲಿಗೆ ಹೋಗಬಹುದು ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡುವ ಮೂಲಕ ಸಂಪುಟ ವಿಸ್ತರಣೆ ವೇಳೆ ಆಯ್ಕೆ ಮಾಡಿಕೊಂಡ ಹೆಸರುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ಹೈಕಮಾಂಡ್ ಸಮ್ಮತಿಯಿಂದಲೇ ಸಂಪುಟ ವಿಸ್ತರಣೆ ಆಗಿದೆ. ಅಸಮಾಧಾನ ಇದ್ದರೆ ಅಲ್ಲಿಯೇ ಹೋಗಿ ಕೇಳಿ ಎನ್ನುವ ಮೂಲಕ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷದ ಬಳಿಕ ಮೊದಲ ಬಾರಿ ಸಿಎಂ ಇಂತಹ ಹೇಳಿಕೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಈ ಹೇಳಿಕೆ ಅಸಮಾಧಾನಿತರನ್ನು ಮತ್ತಷ್ಟು ಕೆರಳಿಸುವ ಸಾಧ್ಯತೆ ಇದ್ದು, ರೇಣುಕಾಚಾರ್ಯರನ್ನು ಸಂಪರ್ಕಿಸಿ ಕೆಲವರು ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೆ ಕೆಲವರು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ವೇಳೆಯಲ್ಲಿ ಸಂಪರ್ಕ ಮಾಡಿ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಯನ್ನು ಸಿಎಂ ಯಡಿಯೂರಪ್ಪ ಪರಿಗಣಿಸದೇ ಮೌನವಾಗಿ ಉಳಿದರೆ ಅಸಮಾಧಾನಿತರ ಅತೃಪ್ತಿಯ ಚಟುವಟಿಕೆ ದೆಹಲಿ ಅಂಗಳಕ್ಕೆ ಸಂಪೂರ್ಣವಾಗಿ ಶಿಫ್ಟ್ ಆದರೂ ಅಚ್ಚರಿ ಇಲ್ಲ.