ಬೆಂಗಳೂರು : 2023ನೇ ಸಾಲಿನ ಮೈಸೂರು ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ಆಚರಣೆ ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ನಾಡಹಬ್ಬ ಮೈಸೂರು ದಸರಾ 2023 ಮಹೋತ್ಸವಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ದಸರಾ ಮಹೋತ್ಸವ ಚಾಮುಂಡೇಶ್ವರಿ ಬೆಟ್ಟದಲ್ಲಿ 15.10.2023ರಂದು ಬೆಳಗ್ಗೆ 10.15-10.36 ಶುಭ ಲಗ್ನದಲ್ಲಿ ಉದ್ಘಾಟನೆ ಆಗಲಿದೆ. ದಸರಾ ಪಾರಂಪರಿಕ ಉತ್ಸವವಾಗಿದೆ. ದಸರಾ ಮಹೋತ್ಸವ ಹೆಚ್ಚು ಜನರ ಉತ್ಸವ ಆಗಬೇಕು. ದಸರಾದಲ್ಲಿ ಮುಖ್ಯವಾಗಿ ಜನರ ಆಕರ್ಷಣೆ ಮಾಡುವಂತದ್ದು ದೀಪಾಲಂಕಾರ, ಮೆರವಣಿಗೆ, ಜಂಬೂ ಸವಾರಿ, ಸ್ತಬ್ಧ ಚಿತ್ರಗಳು ಇರಲಿವೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾ ಎಲ್ಲವೂ ಇರಲಿದೆ. ದೀಪಾಲಂಕಾರ ಅಂದು ಪ್ರಾರಂಭವಾಗಲಿದೆ. ದಸರಾ ಮುಗಿದು ಒಂದು ವಾರದ ತನಕ ದೀಪಾಲಂಕಾರ ಇರಲಿದೆ. ಸುತ್ತಮುತ್ತ ಪ್ರದೇಶಗಳಲ್ಲೂ ದೀಪಾಲಂಕಾರ ಮಾಡಲು ಸೂಚನೆ ನೀಡಲಾಗಿದೆ. ದಸರಾ ಮಹೋತ್ಸವ ಉದ್ಘಾಟನೆ ದಿನದಂದೇ ವಸ್ತು ಪ್ರದರ್ಶನ ಆರಂಭಿಸಲು ಸೂಚನೆ ನೀಡಲಾಗಿದೆ. ಶ್ರೀರಂಗಪಟ್ಟಣ, ಚಾಮರಾಜನಗರದಲ್ಲೂ ದಸರಾ ನಡೆಯುತ್ತವೆ ಎಂದರು.
ದಸರಾ ಸ್ತಬ್ದ ಚಿತ್ರಗಳಲ್ಲಿ ಪಂಚ ಗ್ಯಾರಂಟಿ ಪ್ರದರ್ಶನ: ಈ ಬಾರಿ ಸ್ತಬ್ದ ಚಿತ್ರ ಪ್ರದರ್ಶನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದರು. ಸ್ತಬ್ಧ ಚಿತ್ರ ಆಯ್ಕೆ ಮಾಡುವಾಗ ರಾಜ್ಯದ ಪರಂಪರೆ, ಜಿಲ್ಲೆಗಳ ವಿಶೇಷತೆಯನ್ನು ಪ್ರತಿಬಿಂಬಿತವಾಗಬೇಕು. ಜೊತೆಗೆ ಐದೂ ಗ್ಯಾರಂಟಿಗಳನ್ನು ಜನರಿಗೆ ತಿಳಿಸುವ ರೀತಿಯಲ್ಲಿ ಸ್ತಬ್ಧ ಚಿತ್ರದಲ್ಲಿ ಪ್ರದರ್ಶನ ಇರಬೇಕು ಎಂದು ಸೂಚಿಸಲಾಗಿದೆ ಎಂದರು.
ವೆಚ್ಚದ ಬಗ್ಗೆ ಕಾರ್ಯಕಾರಿಣಿ ಸಮಿತಿ ನಿರ್ಧಾರ: ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಕಾರ್ಯಕಾರಿಣಿ ಸಮಿತಿ, ದಸರಾ ಹಬ್ಬದ ಖರ್ಚು ವೆಚ್ಚ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಇದೇ ವೇಳೆ ತಿಳಿಸಿದರು.
2022 ಸಾಲಿನ ದಸರಾ ಮಹೋತ್ಸವಕ್ಕೆ 30 ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿಯ ಖರ್ಚು ವೆಚ್ಚದ ಬಗ್ಗೆ ಕಾರ್ಯಕಾರಿಣಿ ಸಮಿತಿ ನಿರ್ಧರಿಸಲಿದೆ. ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಪ್ರವಾಸೋದ್ಯಮ ಸಚಿವರೂ ಇರಲಿದ್ದಾರೆ ಎಂದರು. ಇನ್ನು, ಈ ಬಾರಿ ದಸರಾ ಮಹೋತ್ಸವದ ವೇಳೆ ಏರ್ ಶೋ ಮಾಡಲು ಚಿಂತನೆ ಇದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚಿಸುತ್ತೇನೆ. ಕಳೆದ ಬಾರಿ ಸಿಎಂ ಆಗಿದ್ದಾಗ ಏರ್ ಶೋ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ದಸರಾ ಉದ್ಘಾಟನೆಗೆ ಸುತ್ತೂರು ಸ್ವಾಮೀಜಿ ಹೆಸರು ಪ್ರಸ್ತಾಪ: ದಸರಾ ಮಹೋತ್ಸವ ಉದ್ಘಾಟಕರ ಆಯ್ಕೆ ಅಧಿಕಾರ ಸಿಎಂ ಹೆಗಲಿಗೆ ನೀಡಲಾಗಿದೆ. ಮೈಸೂರು ನಗರ ಒಂದು ಸಾಂಸ್ಕೃತಿಕ ನಗರವಾಗಿದೆ. ದಸರಾ ಮಹೋತ್ಸವ ಉದ್ಘಾಟನೆ ಯಾರು ಮಾಡಬೇಕು ಎಂಬುದನ್ನು ಆಯ್ಕೆ ಮಾಡುವ ಅಧಿಕಾರ ನನಗೆ ನೀಡಲಾಗಿದೆ. ಈ ಬಗ್ಗೆ ಚರ್ಚೆ ಮಾಡಿ ಆಯ್ಕೆ ಮಾಡಲಾಗುವುದು ಎಂದರು.
ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ : ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಸುತ್ತೂರು ಸ್ವಾಮಿಗಳಿಂದ ದಸರಾ ಹಬ್ಬ ಉದ್ಘಾಟಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಚರ್ಚೆ ಮಾಡಿ ನಿರ್ಧರಿಸುವುದಾಗಿ ಸಿಎಂ ಸ್ಪಷ್ಟಪಡಿಸಿದರು. ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ. ಅನಗತ್ಯ ಖರ್ಚು ಇರಬಾರದು. ಪ್ರವಾಸಿಗರನ್ನು ಹೆಚ್ಚಿಗೆ ಆಕರ್ಷಿಸುವಂತೆ ದಸರಾ ಹಬ್ಬ ಇರಬೇಕು. ಶಕ್ತಿ ಯೋಜನೆ ಕಾರಣ ರಾಜ್ಯಾದ್ಯಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ ಎಂದು ಇದೇ ವೇಳೆ ತಿಳಿಸಿದರು.
ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಸಚಿವರಾದ ಹೆಚ್ ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಹೆಚ್ ಕೆ ಪಾಟೀಲ್, ಭೈರತಿ ಸುರೇಶ್, ವೆಂಕಟೇಶ್, ಶಾಸಕ ತನ್ವೀರ್ ಸೇಠ್, ಜಿ ಟಿ ದೇವೇಗೌಡ, ಶ್ರೀವತ್ಸ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಈ ವರ್ಷ ವಿಶ್ವ ಪ್ರಸಿದ್ದ ಮೈಸೂರು ದಸರಾ ಅದ್ದೂರಿ ಆಚರಣೆ: ಸಚಿವ ಮಹಾದೇವಪ್ಪ