ಬೆಂಗಳೂರು: ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ. ಬರಗಾಲದ ಬಗ್ಗೆ ಪ್ರಧಾನಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳುತ್ತಿದ್ದೇನೆ. ಬರಗಾಲದ ಬಗ್ಗೆ ಪ್ರಧಾನಿ ಜೊತೆ ಚರ್ಚೆ ಮಾಡಲು ಸಮಯ ಕೇಳಿದ್ದೇ. ಜೊತೆಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮೀಟಿಂಗ್ ಇದೆ, ಅದನ್ನು ಅಟೆಂಡ್ ಮಾಡುತ್ತೇನೆ. ಜೊತೆಗೆ ಲೋಕಸಭಾ ಚುನಾವಣೆ ಬಗ್ಗೆಯೂ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಜೊತೆ ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚೆ ಮಾಡುತ್ತೇವೆ. ಈಗಾಗಲೇ ಲಿಸ್ಟ್ ಕಳಿಸಲಾಗಿದೆ ಎಂದರು.
ನೆರೆ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ ಸಂಬಂಧ ಪ್ರತಿಕ್ರಿಯಿಸಿ, ಆರೋಗ್ಯ ಸಚಿವರಿಗೆ ಸಭೆ ಮಾಡಲು ಹೇಳಿದ್ದೇನೆ. ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಲು ಸೂಚಿಸಿದ್ದೇನೆ ಎಂದರು.
ಕ್ರಿಶ್ಚಿಯನ್ ಸಮುದಾಯದ ಸೇವೆ ಶ್ಲಾಘನೀಯ: ಸಾಮಾಜಿಕ ಅಸಮಾನತೆಯಿರುವ ಕಾಲಮಾನದಲ್ಲಿ ಕ್ರಿಶ್ಚಿಯನ್ ಸಮುದಾಯದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲೀನಿಯರ್ ಆಕ್ಸರಲೇಟರ್ ರೆಡಿಯಷನ್ ಥೆರಪಿ ಸೇವೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯ ಅತ್ಯುತ್ತಮ ಕೆಲಸ ಮಾಡಿದೆ. ಉಡುಪಿ ಹಾಗೂ ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಈ ಸಮುದಾಯ ಒಳ್ಳೆಯ ಬುನಾದಿ ಹಾಕಿದೆ ಎಂದರು.
ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆ ಗುಣಪಡಿಸುವ ಆಧುನಿಕ ಚಿಕಿತ್ಸಾ ವಿಧಾನವಾದ ಲೀನಿಯರ್ ಆಕ್ಸರಲೇಟರ್ ರೆಡಿಯಷನ್ ಥೆರಪಿ ಸೇವೆಯನ್ನು ಇಂದು ಉದ್ಘಾಟಿಸಲಾಗಿದೆ. ಪ್ರಥಮ ಹಂತದಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಚ್ಚಿದರೆ, ರೋಗವನ್ನು ಗುಣಪಡಿಸಬಹುದು. ಕಡೆಯ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಾಗ, ಕಾಯಿಲೆ ಉಲ್ಬಣಗೊಳ್ಳದಿರಲು ಈ ಅತ್ಯಾಧುನಿಕ ಚಿಕಿತ್ಸೆ ಸಹಕಾರಿಯಾಗಿದೆ. ಈ ಆಸ್ಪತ್ರೆಗೆ ಹಳ್ಳಿಗಾಡಿನ ಜನರು ಹೆಚ್ಚು ಬರುವುದರಿಂದ ಇಲ್ಲಿನ ವೈದ್ಯರು ಕನ್ನಡದಲ್ಲಿ ಮಾತನಾಡುವುದರಿಂದ ರೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.
ಶ್ರೀಮಂತರು ಉತ್ತಮ ಹಾಗೂ ದುಬಾರಿ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ಬಡಜನರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುವ ಬ್ಯಾಪ್ಟಿಸ್ಟ್ ಆಸ್ಪತ್ರೆ ಜನಸೇವೆಯಲ್ಲಿ ನಂಬಿಕೆ ಇರಿಸಿದೆ. ಬ್ಯಾಪ್ಟಿಸ್ಟ್ ಆಸ್ಪತ್ರೆಯು ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತಾ ಬಂದಿದೆ. ಸರ್ಕಾರಿ ಆಸ್ಪತ್ರೆಯಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಸರ್ಕಾರ ಈ ಆಸ್ಪತ್ರೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಇದನ್ನೂ ಓದಿ: ನಿಗಮ ಮಂಡಳಿ ನೇಮಕ ಪಟ್ಟಿ ಅಂತಿಮಗೊಳಿಸುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್