ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸ ಕಾವೇರಿಗೆ ಆರೋಗ್ಯ ಸಚಿವ ಡಾ.ಸುಧಾಕರ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಖುಷಿ ಖುಷಿಯಾಗಿ ಕೆಲಕಾಲ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಯಡಿಯೂರಪ್ಪರನ್ನು ಭೇಟಿಯಾಗುತ್ತಿದ್ದಂತೆ ಸಂಪುಟ ಸಹೋದ್ಯೋಗಿಗೆ ಹುಟ್ಟುಹಬ್ಬದ ಶುಭ ಕೋರಿದರು. ನಂತರ ಬಿಎಸ್ವೈರಿಂದ ಸುಧಾಕರ್ ಆಶೀರ್ವಾದ ಪಡೆದುಕೊಂಡರು. ನಂತರ ಕೆಲ ಸಮಯ ಕೋವಿಡ್ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ ಅವರು, ಬ್ಲಾಕ್ ಫಂಗಸ್, ವೈಟ್ ಫಂಗಸ್ ನಂತರ ರಾಜ್ಯದಲ್ಲಿ ಗ್ರೀನ್ ಫಂಗಸ್ ಕಾಣಿಸಿಕೊಂಡಿದ್ದು, ಈ ಬಗ್ಗೆಯೂ ನಿಗಾವಹಿಸುವ ಸಂಬಂಧ ಮಾತುಕತೆ ನಡೆಸಲಾಯಿತು ಎನ್ನಲಾಗಿದೆ.
ಇದೇ ವೇಳೆ ಸಿಎಂ ನಿವಾಸದಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆಗೂ ಸುಧಾಕರ್ ಮಾತುಕತೆ ನಡೆಸಿದರು. ವಿಜಯೇಂದ್ರ ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ವರಿಷ್ಠರ ಜೊತೆ ಮಾತುಕತೆ ನಡೆಸಿ ವಾಪಸಾಗಿದ್ದಾರೆ.
ಅದರ ಬೆನ್ನಲ್ಲೇ ವಿಜಯೇಂದ್ರ ಜೊತೆ ಸುಧಾಕರ್ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ. ಜಾರಕಿಹೊಳಿ ರಾಜೀನಾಮೆ ಹೇಳಿಕೆ ನಂತರದ ಬೆಳವಣಿಗೆ ಕುರಿತು ಮಾತುಕತೆ ನಡೆದಿರಬಹುದು ಎನ್ನಲಾಗಿದೆ.
ಓದಿ: ಊಟ ಹಾಕಿದ ತಾಯಿಯನ್ನೇ ಕಾಮಿಸಿದವರು : ಚೆಲುವರಾಯಸ್ವಾಮಿ ವಿರುದ್ಧ ಶಾಸಕ ಸುರೇಶ್ ಗೌಡ ವ್ಯಂಗ್ಯ