ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವಕ್ಕೆ ನಿಜವಾದ ಅಗ್ನಿ ಪರೀಕ್ಷೆ ಗುರುವಾರದಿಂದ ಆರಂಭವಾದಂತಾಗಿದೆ. ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕೂಗಿನ ಬೆನ್ನಲ್ಲೇ ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್ ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಆ ಮೂಲಕ ಯಡಿಯೂರಪ್ಪ ಅವರ ಅಗ್ನಿ ಪರೀಕ್ಷೆ ನಡೆಯುವಂತಾಗಿದೆ. ರಾಜ್ಯ ಬಿಜೆಪಿ ಹೊಣೆ ಹೊತ್ತ ಅರುಣ್ ಸಿಂಗ್ ವರಿಷ್ಠರ ಸ್ಪಷ್ಟ ಸೂಚನೆಯೊಂದಿಗೆ ಬುಧವಾರ ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರೊಂದಿಗೆ ಚರ್ಚಿಸಿದ್ದಾರೆ. ಈ ಬಾರಿಯ ಅವರ ಭೇಟಿಯ ಸಂದರ್ಭದಲ್ಲಿ ಶಾಸಕಾಂಗ ಸಭೆ ಕರೆದು ಶಾಸಕರ ಅಭಿಪ್ರಾಯ ಆಲಿಸಬಹುದು ಎಂಬುದು ಯಡಿಯೂರಪ್ಪ ಅವರ ಇಂಗಿತವಾಗಿತ್ತು. ಆದರೆ ಶಾಸಕಾಂಗ ಸಭೆಯಲ್ಲಿ ಎಲ್ಲರೂ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಲಾಗುವುದಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಭಿನ್ನರು ಧ್ವನಿ ಎತ್ತಿದ್ದರು.
ಹಾಗಾಗಿ, ಗುರುವಾರ ಮತ್ತು ಶುಕ್ರವಾರ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲು ಅರುಣ್ ಸಿಂಗ್ ನಿರ್ಧರಿಸಿದ್ದಾರೆ. ಇದೇ ರೀತಿ ಶಾಸಕರ ಅಭಿಪ್ರಾಯ ಸಂಗ್ರಹಿಸುವಾಗ ತಮ್ಮ ಉಪಸ್ಥಿತಿಗೆ ಅವಕಾಶ ಇರಬೇಕೆಂದು ಯಡಿಯೂರಪ್ಪ ಬಯಸಿದ್ದರಾದರೂ ಭಿನ್ನರ ಆಕ್ಷೇಪದ ಹಿನ್ನೆಲೆ ಅದಕ್ಕೂ ಅವಕಾಶ ನೀಡದಿರಲು ಅರುಣ್ ಸಿಂಗ್ ನಿರ್ಧರಿಸಿದ್ದಾರೆ.
ಮತ್ತೋರ್ವ ಲಿಂಗಾಯತ ನಾಯಕನಿಗೆ ಹುಡುಕಾಟ
ಹೀಗಾಗಿ ಅರುಣ್ ಸಿಂಗ್ ಬಂದ ಮೇಲೆ ಯಡಿಯೂರಪ್ಪ ಪರ ಗುಂಪಿನ ಕೈಮೇಲಾದಂತೆ ಎಂದು ನಿರೀಕ್ಷಿಸಲಾಗಿತ್ತಾದರೂ, ಮೊದಲ ದಿನವೇ ಭಿನ್ನರ ಶಿಬಿರದಲ್ಲಿ ಹರ್ಷದ ವಾತಾವರಣ ಕಾಣಿಸಿಕೊಂಡಿದೆ. ಈ ಮಧ್ಯೆ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಹೆಚ್.ವಿಶ್ವನಾಥ್ ಸೇರಿದಂತೆ 15 ಮಂದಿ ಶಾಸಕರು ಪ್ರತ್ಯೇಕ ಸಭೆ ನಡೆಸಿ, ಯಡಿಯೂರಪ್ಪ ಬದಲಾವಣೆಗೆ ಆಗ್ರಹಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಅವರ ಆಡಳಿತದಲ್ಲಿ ಮಗ ವಿಜಯೇಂದ್ರ ಹಸ್ತಕ್ಷೇಪ ಅತಿಯಾಗಿದೆ, ಶಾಸಕರನ್ನು ನಿರ್ಲಕ್ಷಿಸುವ ಕೆಲಸ ನಡೆಯುತ್ತಿದೆ ಎಂಬುದೂ ಸೇರಿದಂತೆ ಹಲವು ಕಾರಣಗಳನ್ನು ಅರುಣ್ ಸಿಂಗ್ ಮುಂದಿಡಲು ಈ ಸಭೆಯಲ್ಲಿ ಭಿನ್ನರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ನಾಯಕತ್ವದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಮತ್ತೋರ್ವ ಲಿಂಗಾಯತ ನಾಯಕರನ್ನೇ ತನ್ನಿ ಎಂದು ಹೇಳಲು ಸಭೆ ತೀರ್ಮಾನಿಸಿದೆ.
ಬಿಎಸ್ವೈ ಬಿಟ್ಟರೆ ಭವಿಷ್ಯವಿಲ್ಲ
ಹೀಗೆ ಭಿನ್ನರ ಶಿಬಿರದಲ್ಲಿ ಯುದ್ಧೋತ್ಸಾಹ ಕಾಣುತ್ತಿದ್ದಂತೆಯೇ ಯಡಿಯೂರಪ್ಪ ಬಣ ಕೂಡಾ ಶಾಸಕರನ್ನು ಓಲೈಸುವ ಆಟ ಆರಂಭಿಸಿದೆ. ಬಿಎಸ್ವೈ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಹೋಗದಿದ್ದರೆ ಬಿಜೆಪಿಗೆ ಭವಿಷ್ಯವಿಲ್ಲ ಎಂಬುದರಿಂದ ಹಿಡಿದು, ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ನಿಧಿ ಕೊಡುವುದರವರೆಗೆ ಹಲವು ಓಲೈಕೆ ಮಾಡಲಾಗುತ್ತಿದೆ.
ಆ ಮೂಲಕ ನಾಯಕತ್ವದ ಪ್ರಶ್ನೆಗೆ ತಾರ್ಕಿಕ ಉತ್ತರ ಸಿಗುವ ಘಳಿಗೆ ಹತ್ತಿರವಾದಂತಾಗಿದೆ. ತಮ್ಮ ಮೂರು ದಿನಗಳ ಭೇಟಿಯ ನಂತರ ದೆಹಲಿಗೆ ವಾಪಸಾಗಲಿರುವ ಅರುಣ್ ಸಿಂಗ್, ರಾಜ್ಯದ ಪರಿಸ್ಥಿತಿಯ ಕುರಿತು ವರಿಷ್ಠರಿಗೆ ವರದಿ ನೀಡಲಿದ್ದಾರೆ. ಆ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ನಾಯಕತ್ವದ ಪ್ರಶ್ನೆಗೆ ಉತ್ತರ ಸಿಗಲಿದ್ದು, ಯಡಿಯೂರಪ್ಪ ಮುಂದುವರಿಯುತ್ತಾರೋ? ಇಲ್ಲವೇ ರಾಜ್ಯಕ್ಕೆ ಹೊಸ ಸಿಎಂ ಬರುತ್ತಾರೋ? ಎಂಬುದು ನಿಶ್ಚಯವಾಗಲಿದೆ.