ಬೆಂಗಳೂರು: ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ವಾರ್ಡ್ 45ರ ಪಟೇಲ್ ಭೈರಹನುಮಯ್ಯ ಕೊಳೆಗೇರಿಯ ಫಲಾನುಭವಿಗಳಿಗೆ ನಿರ್ಮಿಸಿರುವ 60 ಮನೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 131ನೇ ಜಯಂತ್ಯುತ್ಸವದ ಅಂಗವಾಗಿ ಬಿಬಿಎಂಪಿ ವತಿಯಿಂದ ಯಶವಂತಪುರದ ಸಂವಿಧಾನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 5.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ 60 ಮನೆಗಳಿರುವ ಬಹುಮಹಡಿ ಕಟ್ಟಡದ ಉದ್ಘಾಟನೆಯನ್ನು ಅವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಂಬೇಡ್ಕರ್ ಎಲ್ಲರಿಗೂ ಸಮಾನತೆ, ಬದುಕುವ ಅವಕಾಶಗಳು, ನಿಷ್ಪಕ್ಷಪಾತ ನ್ಯಾಯ ಸಿಗುವ ವ್ಯವಸ್ಥೆ ನಿರ್ಮಾಣವಾಗಬೇಕೆಂದು ಪ್ರತಿಪಾದಿಸಿದ ಅಗಾಧ ಜ್ಞಾನಿ. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆದು ನಮ್ಮ ಸರ್ಕಾರವು ದುರ್ಬಲ ವರ್ಗದವರನ್ನು ಸಬಲೀಕರಿಸಲು ಒತ್ತು ಕೊಡುತ್ತಿದೆ ಎಂದರು.
ಕರಿಮಂಡಿ ಕೊಳೆಗೇರಿಯಲ್ಲಿ 36 ಮನೆಗಳನ್ನು ಕಟ್ಟಲಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ (ಯಶವಂತಪುರ ಮಾರ್ಕೆಟ್ ಪಕ್ಕ) ಕೊಳೆಗೇರಿ ಪ್ರದೇಶದಲ್ಲಿ 35 ಮನೆಗಳನ್ನು ಕಟ್ಟಲಾಗಿದೆ. ಸಿದ್ಧಾರ್ಥ ಕೊಳೆಗೇರಿಯಲ್ಲಿ 100 ಒಂಟಿ ಮನೆಗಳನ್ನು ಕಟ್ಟಲಾಗಿದೆ. ಎನ್ಎಚ್ ಕಾಲೋನಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ, ಈಗ ಪಟೇಲ್ ಭೈರಹನುಮಯ್ಯ ಕೊಳೆಗೇರಿಯಲ್ಲಿ 60 ಮನೆಗಳನ್ನು ಕಟ್ಟಲಾಗಿದ್ದು ಇನ್ನೂ 60 ಮನೆಗಳಿರುವ ಕಟ್ಟಡ ನಿರ್ಮಾಣಕ್ಕೆ ಇಂದು ಚಾಲನೆ ಕೊಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಕೇಸ್.. ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ವಿಧಾನಸೌಧದಲ್ಲಿ ಕಾಂಗ್ರೆಸ್ ಧರಣಿ
ಬೆಂಗಳೂರು ಉತ್ತರ ಲೋಕಸಭಾ ಸಂಸದ ಡಿ.ವಿ.ಸದಾನಂದ ಗೌಡ ಮಾತನಾಡಿ, ಮಲ್ಲೇಶ್ವರ ಕ್ಷೇತ್ರದಲ್ಲಿ ಕೊಳೆಗೇರಿಗಳ ನಿರ್ಮೂಲನೆಗಾಗಿ ರಚನಾತ್ಮಕವಾಗಿ ನಡೆಯುತ್ತಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಸಿಎಂ ₹15 ಕೋಟಿ ವೆಚ್ಚದಲ್ಲಿ ನಡೆಯಲಿರುವ ಯಶವಂತಪುರ ಮೇಲ್ಸೇತುವೆ ಅಗಲೀಕರಣ, ಮೈಸೂರು ಲ್ಯಾಂಪ್ಸ್ ಹತ್ತಿರ ರೈಲ್ವೆ ಕೆಳಸೇತುವೆ, ಮಲ್ಲೇಶ್ವರ 18ನೇ ಕ್ರಾಸ್ ನಿರ್ಮಲಾ ರಾಣಿ ಶಾಲೆ ಹತ್ತಿರ ರೈಲ್ವೆ ಕೆಳಸೇತುವೆ ನಿರ್ಮಾಣಗಳಿಗೆ ಶಂಕುಸ್ಥಾಪನೆ ಹಾಗೂ ಪಟೇಲ್ ಭೈರಹನುಮಯ್ಯ ಪ್ರದೇಶದಲ್ಲಿ ಇನ್ನೂ 60 ಮನೆಗಳ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.