ಬೆಂಗಳೂರು/ಬೀದರ್: ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಟ್ಟು ತಮ್ಮ ನೇತೃತ್ವದಲ್ಲೇ ಎರಡನೇ ಹಂತದ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಬ್ಬರಿಸಿ ಬೊಬ್ಬಿರಿದರೆ ಇಲ್ಲಾರು ಕೇಳುವವರಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಬಿಟ್ಟು ಪ್ರಚಾರಕ್ಕೆ ಹೋಗಲು ಸಿಎಂಗೆ ಭಯ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಎರಡು ತಂಡದಲ್ಲಿ ರಾಜ್ಯದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಸಂಘಟನಾತ್ಮಕ ತಂಡದ ನೇತೃತ್ವವನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಹಿಸಿದ್ದು, ಅವರಿಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಾಥ್ ನೀಡಿದ್ದರೆ, ಎರಡನೇ ತಂಡದ ನೇತೃತ್ವವನ್ನು ಯಡಿಯೂರಪ್ಪ ಮತ್ತು ಬೊಮ್ಮಾಯಿ ಇಬ್ಬರಿಗೂ ವಹಿಸಲಾಗಿದೆ. ಒಂದೇ ತಂಡದಲ್ಲಿ ಈ ಇಬ್ಬರು ನಾಯಕರೂ ಪ್ರವಾಸ ಕೈಗೊಂಡಿದ್ದು, ಮೊದಲ ಹಂತದಲ್ಲಿ ಮೂರು ದಿನದ ಪ್ರವಾಸ ಮುಗಿಸಿದ್ದಾರೆ. ಈ ಪ್ರವಾಸದ ವೇಳೆ ಬಿಜೆಪಿ ಕಾಲೆಳೆದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ, ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ. ಇದಕ್ಕಾಗಿ ರಕ್ಷಣೆಗಾಗಿ ಯಡಿಯೂರಪ್ಪ ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ ಎಂದು ಲೇವಡಿ ಮಾಡಿದ್ದರು.
ಸಿದ್ದರಾಮಯ್ಯ ಟೀಕೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಅವರಿಲ್ಲದೆ ಕೇವಲ ತಮ್ಮ ನೇತೃತ್ವದಲ್ಲೇ ಬೀದರ್ ಪ್ರವಾಸಕ್ಕೆ ತೆರಳಿದ್ದು ಅಬ್ಬರದ ಭಾಷಣ ಮಾಡಿದ್ದಾರೆ. ಅಬ್ಬರಿಸಿ ಬೊಬ್ಬಿರಿದರೆ ಕೇಳುವವರು ಯಾರಿಲ್ಲ, ನಿಮ್ಮ ಕಾಲದ ಹಗರಣಗಳ ವಿವರಗಳನ್ನು ನಿಮ್ಮ ನಾಯಕ ರಾಹುಲ್ ಗಾಂಧಿಗೆ ಕಳಿಸಿಕೊಡಲಿದ್ದೇವೆ ಎಂದು ಅಬ್ಬರಿಸಿದ್ದಾರೆ.
ಬೀದರ್ ಜಿಲ್ಲೆಯ ಪ್ರವಾಸದುದ್ದಕ್ಕೂ ತೀಕ್ಷ್ಣ ಭಾಷಣ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಕ್ಷಕ್ಕಿಂತಲೂ ಮುಖ್ಯವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. 2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ನೇಮಕಾತಿ, ಪೊಲೀಸ್ ನೇಮಕಾತಿ ಹಗರಣಗಳ ಪ್ರಸ್ತಾಪಿಸಿ ಹರಿಹಾಯುತ್ತಿದ್ದಾರೆ. ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ, ರಾಜ್ಯದ ಜನಪರ ಯೋಜನೆಗಳ ಪ್ರಸ್ತಾಪಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಏರುದನಿಯಲ್ಲಿ ಸಿದ್ದರಾಮಯ್ಯ ವಿರುದ್ದ ಹಿಗ್ಗಾ ಮುಗ್ಗಾ ಹರಿಹಾಯ್ದರು. ಸೇಡು ತೀರಿಸಿಕೊಳ್ಳುವವರಂತೆ ವೇದಿಕೆಯ ನಡುವೆ ನಿಂತ ಯಡಿಯೂರಪ್ಪ ಇಲ್ಲದೆ ಏಕಾಂಗಿಯಾಗಿಯೇ ಇದ್ದೇನೆ ನೋಡಿ ಎನ್ನುವ ಅರ್ಥ ಬರುವಂತೆ ನಿರರ್ಗಳವಾಗಿ ಮಾತಿನ ಮಳೆ ಸುರಿಸಿ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ಇಂದು ಮತ್ತು ನಾಳೆ ಎರಡು ದಿನ ಯಡಿಯೂರಪ್ಪ ಇಲ್ಲದೇ ಒಬ್ಬರೇ ರಾಜ್ಯ ಪ್ರವಾಸ ನಡೆಸಿ ಜನ ಸಂಕಲ್ಪ ಯಾತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುನ್ನಡೆಸುತ್ತಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ಯಡಿಯೂರಪ್ಪ ನವದೆಹಲಿಗೆ ಎರಡು ದಿನಗಳ ಪ್ರವಾಸಕ್ಕೆ ತೆರಳಿರುವ ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವ ಸಿಎಂ ಬೊಮ್ಮಾಯಿ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಪೂರ್ವ ನಿಗದಿಯಂತೆ ಜನಸಂಕಲ್ಪ ಯಾತ್ರೆ ಮುಂದುವರೆಸಿಕೊಂಡು ಹೋಗಿ ಸಿದ್ದರಾಮಯ್ಯಗೆ ತಕ್ಕ ಉತ್ತರ ನೀಡುವಲ್ಲಿ ಸಫಲರಾಗಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕ್ಷಣದಿಂದಲೇ ರಾಜ್ಯ ಪ್ರವಾಸಕ್ಕೆ ಹೊರಡಲು ಯತ್ನಿಸುತ್ತಲೇ ಬಂದಿರುವ ಯಡಿಯೂರಪ್ಪ ಅವರಿಗೆ ಪ್ರತ್ಯೇಕ ಪ್ರವಾಸ ನಡೆಸಲು ಅನುಮತಿ ನೀಡದೆ ಸತಾಯಿಸಿದ್ದ ಬಿಜೆಪಿ ಹೈಕಮಾಂಡ್ ಈಗಲೂ ಯಡಿಯೂರಪ್ಪ ನೇತೃತ್ವದ ಪ್ರತ್ಯೇಕ ತಂಡ ಪ್ರವಾಸಕ್ಕೆ ಹೋಗುವುದಕ್ಕೆ ಅನುಮತಿ ನೀಡದೆ ಸರ್ಕಾರ ಮತ್ತು ಸಂಘಟನೆ ಭಾಗವಾಗಿ ಎರಡು ತಂಡಗಳಷ್ಟೇ ಇರಲಿ, ಸಿಎಂ ಮತ್ತು ಬಿಎಸ್ವೈ ಒಂದೇ ತಂಡದಲ್ಲಿ ಇರಲಿ ಎಂದು ಸೂಚಿಸಿದೆ. ಒಲ್ಲದ ಮನಸ್ಸಿನಿಂದಲೇ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ನಿರ್ಧರಿಸಿದ್ದು, ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ತಂಡ ರಾಜ್ಯದ 50 ಕ್ಷೇತ್ರಗಳಿಗೆ ಪ್ರವಾಸ ಹೊರಟಿದೆ.
ಬಿಎಸ್ವೈ ದೆಹಲಿ ಪ್ರವಾಸ: ಹೈಕಮಾಂಡ್ ಸೂಚನೆಯಂತೆ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವದೆಹಲಿಗೆ ತೆರಳಿದ್ದಾರೆ. ಸಂಜೆ ನಡೆಯಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿ ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಮಧ್ಯಾಹ್ನ ನವದೆಹಲಿಯಿಂದ ಹೊರಡಲಿರುವ ಯಡಿಯೂರಪ್ಪ ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಹಾಗಾಗಿ ಈ ಎರಡು ದಿನ ಬೊಮ್ಮಾಯಿ ಒಬ್ಬರೇ ಜನಸಂಕಲ್ಪ ಯಾತ್ರೆಯ ನೇತೃತ್ವ ವಹಿಸಲಿದ್ದು, ಯಡಿಯೂರಪ್ಪ ವಾಪಸ್ಸಾದ ನಂತರ ಮತ್ತೆ ಜೋಡಿಯಾಗಿ ಪ್ರವಾಸ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ?: ಸುಳಿವು ಕೊಟ್ಟ ಪುತ್ರ ಯತೀಂದ್ರ