ಬೆಂಗಳೂರು: ಕಾಂಗ್ರೆಸ್ ಆಡಳಿತ ಪಕ್ಷವಾಗಿ ವಿಫಲವಾಗಿದ್ದರು, ಹಾಗಾಗಿ ಜನ ಅವರನ್ನ ತಿರಸ್ಕರಿಸಿದ್ದರು. ಈಗ ಪ್ರತಿಕ್ಷವಾಗಿಯೂ ಅವರು ವಿಫಲವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಿರಿಯರು. ಅವರ ಅನುಭವ ಎಲ್ಲಿ ಹೋಯಿತು. ರಾಜಕಾರಣದ ಮುಸುಕು ಅವರ ಮುಖದ ಮೇಲೆ ಬಿದ್ದಿದೆ. ಖಂಡಿತವಾಗಿ ಮುಂದೆ ಅವರಿಗೆ ರಾಜಕೀಯ ಭವಿಷ್ಯ ಇಲ್ಲ. ಸದನ ಶುಕ್ರವಾರದವರೆಗೂ ನಡೆಯಬೇಕಿತ್ತು. ರಾಜ್ಯಪಾಲರ ವಂದನಾ ನಿರ್ಣಯದ ಬಗ್ಗೆ ಚರ್ಚೆಯಾಗಬೇಕಿತ್ತು. ಸಚಿವ ಈಶ್ವರಪ್ಪ ಹೇಳಿಕೆ ಕುರಿತು ಚರ್ಚೆ ಮಾಡಬಹುದಿತ್ತು. ನಾವು ಉತ್ತರ ಕೊಡುತ್ತಿದ್ದೆವು ಎಂದು ಕಿಡಿಕಾರಿದರು.
ಈಶ್ವರಪ್ಪನವರ ಹೇಳಿಕೆಯಲ್ಲಿ ಏನು ಇಲ್ಲ. ಬೇರೆ ಸಮಯದಲ್ಲಿ ಸದನ ಕರೆಯಿರಿ ಅಂತಾರೆ, ಸದನ ಕರೆದರೇ ಚರ್ಚೆಯೇ ಮಾಡಲ್ಲ. ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಮಧ್ಯಂತರ ಆದೇಶ ಮಾಡಿದೆ. ಅದನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಹಿಂದೆ ಅವರನ್ನು ಆಡಳಿತ ಪಕ್ಷವಾಗಿ ಕೆಲಸ ಮಾಡಲು ಯೋಗ್ಯವಲ್ಲ ಎಂದು ಜನ ತಿರಸ್ಕರಿಸಿದ್ದರು. ಈಗ ಪ್ರತಿಪಕ್ಷವಾಗಿಯೂ ಜವಾಬ್ದಾರಿ ನಿರ್ವಹಿಸಲು ಅವರು ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಈಶ್ವರಪ್ಪ ಹೇಳಿಕೆಯನ್ನ ಜೆ.ಪಿ. ನಡ್ಡಾ ಖಂಡನೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಿಂದ ರಾಜ್ಯಪಾಲರಿಗೆ ದೂರು ನೀಡುವ ವಿಚಾರವಾಗಿ ಮಾತನಾಡಿದ ಸಿಎಂ, ಪ್ರತಿಪಕ್ಷದವರಿಗೆ ಇನ್ನೇನೂ ಬೇರೆ ಕೆಲಸ, ಪ್ರತಿಭಟನೆ, ಪಾದಯಾತ್ರೆ ಮಾಡಲಿ ಬಿಡಿ ಎಂದು ವ್ಯಂಗ್ಯವಾಡಿದರು.
ಸಚಿವರು ಶಾಸಕರ ವೇತನ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈಗತಾನೆ ವೇತನ ಹೆಚ್ಚಿಸಲು ಪ್ರಸ್ತಾಪ ಮಂಡಿಸಿದ್ದೇವೆ. ಖರ್ಚುಗಳು ಹೆಚ್ಚಾಗಿವೆ. ಇಂದು ಸಂಬಳ ಹೆಚ್ಚು ಮಾಡಿದ್ದಾರೆ ಎಂದು ಹೆಚ್ಚಳವನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ: ಎಡಿಜಿಪಿ ಪ್ರತಾಪ್ ರೆಡ್ಡಿ