ಬೆಂಗಳೂರು: ಕರ್ನಾಟಕ ಚುನಾವಣೆಗೆ ಇನ್ನೂ ಒಂದು ವರ್ಷದ ಸಮಯಾವಕಾಶ ಇದೆ, ಮೋದಿ ಹೆಸರಿನ ನಾಮ ಇದೆ, ನಮ್ಮ ಕಾರ್ಯಕ್ರಮ, ಸಂಘಟನೆ ಇದೆ, ಇವುಗಳ ಜೊತೆಗೆ ನಾವು ಒಗ್ಗಟ್ಟಿನಿಂದ ಮುಂದೆ ಹೋದಲ್ಲಿ ಗೆಲುವು ಶತಃಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರಿಗೆ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನ ಮಂತ್ರ, ಶ್ರಮದಿಂದ ರಾಜ್ಯದಲ್ಲೂ 24 ಗಂಟೆ ನಿರಂತರ ದುಡಿದು ಬಿಜೆಪಿಗೆ ಗೆಲುವು ಸಿಗಬೇಕಿದೆ. ಯೋಜನಾಬದ್ಧ ಚುನಾವಣೆ ಮಾಡೋಣ. ಒಟ್ಟಾಗಿ ನಿಲ್ಲೋಣ. ಒಂದುಗೂಡಿ ಗೆಲುವು ತರೋಣ ಎಂದರು.
ಬಿಜೆಪಿ ಸಂಘಟನೆ ಆಧಾರಿತ ಪಕ್ಷ ಸೋಲು. ಗೆಲುವಿಗಿಂತ ತತ್ವದ ಆಧಾರದ ಮೇಲೆ ಚುನಾವಣೆ ನಡೆಸಿದ್ದೇವೆ. ನಮ್ಮ ತತ್ವ ಸಿದ್ಧಾಂತಗಳಿಗೆ ರಾಜಿ ಮಾಡಿಕೊಂಡಿಲ್ಲ, ನಮ್ಮ ವಿಚಾರಧಾರೆ ನೋಡಿ ಅನೇಕರು ನಮ್ಮ ಪಕ್ಷಕ್ಕೆ ಬಂದರು ಎಂದು ಆಪರೇಷನ್ ಕಮಲ ಸಮರ್ಥಿಸಿಕೊಂಡ ಸಿಎಂ, 2024 ಸೆಮಿಫೈನಲ್ ನಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.
ಯುಪಿಯಲ್ಲಿ ಜಾತಿವಾದವನ್ನು ನೀತಿ ಮೂಲಕ ಬಿಜೆಪಿ ಸೋಲಿಸಿದೆ ಇದು ಮೋದಿ, ಯೋಗಿ ಸಾಧನೆ. ಯುಪಿಯ ಜನ ರಾಷ್ಟ್ರೀಯವಾದಿಗಳು ಅಲ್ಲಿನ ಜನ ಸಂಪೂರ್ಣವಾಗಿ ಹಿಂದುತ್ವ ಒಪ್ಪಿಕೊಂಡಿದ್ದಾರೆ. ಉತ್ತರಾಖಂಡನ ಮನೆಮನೆಯಲ್ಲಿ ಮೋದಿ ಫೊಟೋ ಇದೆ. ಅಲ್ಲಿ ಬಿಜೆಪಿ ಮನೆಯೊಳಗೆ ಸಮಸ್ಯೆ ಇತ್ತು ಅದನ್ನು ಯಾವ ರೀತಿ ಸರಿಪಡಿಸಿದರು ಅಂತ ಎಲ್ಲರಿಗೂ ಗೊತ್ತಿದೆ.
ಗೋವಾದಲ್ಲಿ ಬಿಜೆಪಿಗೆ ಬಹಳ ಸಂಕೀರ್ಣ ಸ್ಥಿತಿ ಇತ್ತು. ಅಲ್ಲಿ ಭಾಷಾ ಆಧಾರಿತ ಸಮಾಜ ಇದೆ. ಅಲ್ಲಿ ಕಾರ್ಯಕರ್ತರು ಇದ್ದರು. ಹಾಗಾಗಿ ನಮಗೆ ಗೆಲುವಾಗಿದೆ. ಪಂಜಾಬ್ ನಲ್ಲಿ ಜಯಶಾಲಿ ಆಗಿಲ್ಲ, ಆದರೆ ಅಲ್ಲಿ ಬಿಜೆಪಿಯ ನೆಲೆಗಟ್ಟು ಭದ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಲಿದೆ ಎಂದು ಪಂಚರಾಜ್ಯ ಚುನಾವಣೆ ಫಲಿತಾಂಶದ ಕುರಿತು ಸಿಎಂ ವಿಶ್ಲೇಷಣೆ ಮಾಡಿದರು.
ಸಿಎಂ ಹಾಸ್ಯ ಚಟಾಕಿ : ಶೋಭಕ್ಕ ಮೂರು ತಿಂಗಳು ಯುಪಿಯಲ್ಲಿದ್ದರು. ನನಗೆ ಭಯ ಆಗಿತ್ತು, ಎಲ್ಲಿ ಶೋಭಕ್ಕೆ ನಮ್ಮ ರಾಜ್ಯ ಮರೆತು ಅಲ್ಲೇ ಇದ್ದು ಬಿಡುತ್ತಾರೆ ಅಂತ ಭಯ ಆಗಿತ್ತು ಎಂದು ಸಿಎಂ ಹಾಸ್ಯ ಚಟಾಕಿ ಹಾರಿಸಿದರು.
ಕರ್ನಾಟಕ ಚುನಾವಣೆ ಗೆಲ್ಲುವ ಬಗ್ಗೆ ಸಿಎಂ ವಿಶ್ವಾಸ: ಕರ್ನಾಟಕ ಚುನಾವಣೆಗೆ ಒಂದು ವರ್ಷ ಇದೆ. ಮೋದಿ ಬಲ ಇದೆ, ಸಂಘಟನೆ ಬಲ ಇದೆ, ಪಕ್ಷದ ನಾಮ ಬಲ ಇದೆ, ನಮ್ಮ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸಿಕೊಂಡು ಹೋಗಬೇಕು,ನಮಗೆ ಬೇಕಿರೋದು ಒಗ್ಗಟ್ಟು, ಒಗ್ಗಟ್ಟಿನಿಂದ ನಾವು ಮುಂದುವರೆದು ಚುನಾವಣೆ ಗೆಲ್ಲೋಣ, ನೂರಕ್ಕೆ ನೂರು ರಾಜ್ಯದಲ್ಲಿ ಕಮಲ ಅರಳಿದೆ, ಒಟ್ಟಾಗಿ ನಿಲ್ಲೋಣ, ಒಟ್ಟಾಗಿ ಮುನ್ನಡೆಯೋಣ ಜಯ ನಮ್ಮದೇ ಎಂದು ಸಿಎಂ ಕರೆ ನೀಡಿದರು.
ಸೋಲಿನಿಂದ ಪಾಠ ಕಲಿತಿದ್ದೇವೆ: ಖಂಡಿತವಾಗಿ 2023 ರಲ್ಲಿ ಸಂಪೂರ್ಣ ಅಧಿಕಾರಕ್ಕೆ ಬರುತ್ತೇವೆ, ನಾನು 24x7 ಕೆಲಸ ಮಾಡುತ್ತೇನೆ. ಸರ್ಕಾರ, ಪಕ್ಷ ಎರಡು ಕಣ್ಣು ಇದ್ದ ಹಾಗೆ, ಎಲ್ಲಿ ಸೋತಿದ್ದೇವೆ ಅಲ್ಲಿ ಗೆಲ್ಲುತ್ತೇವೆ ನನಗೆ 100 ರಷ್ಟು ನಂಬಿಕೆ ಇದೆ. ಕಳೆದ ಬಾರಿಯ ಸಮಸ್ಯೆಗಳಿಂದ ಪಾಠ ಕಲಿತಿದ್ದೇವೆ. ಜನರ ಜೊತೆ ನಾನು ಸಂಪುಟ ಸಭೆ ಸದಸ್ಯರು, ಶಾಸಕರು ಇರುತ್ತೇವೆ ಎಂದರು.