ಬೆಂಗಳೂರು: ಕಾರ್ಮಿಕ ಕಲ್ಯಾಣ ನಮ್ಮ ಮೊದಲ ಆದ್ಯತೆ. ಟಿಎ ಡಿಎ ಎಲ್ಲವೂ ದೊರೆಯುವಂತೆ ಮಾಡುತ್ತೇವೆ. ಕಾರ್ಮಿಕರ ಏಳಿಗೆಗೆ ಬೇಕಾಗುವ ಎಲ್ಲ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
ಕಾರ್ಮಿಕ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ನೂತನ ತಂತ್ರಾಂಶ ಉದ್ಘಾಟನೆ’, ‘ಕಾರ್ಮಿಕರಿಗೆ ಉಚಿತ ಬಸ್‍ಪಾಸ್ ವಿತರಣೆ’ ಹಾಗೂ ‘ಹೆಚ್ಚು ಅಂಕಗಳಿಸಿರುವ ಎಸ್ಎಸ್ಎಸ್ಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ’ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಸಿಎಂ ಮಾತನಾಡಿದರು.
ಕಾರ್ಮಿಕರು ಈ ದೇಶದ ಪ್ರಗತಿಯ ಚಕ್ರದ ರುವಾರಿಗಳು. ನಿಜವಾಗಲೂ ಶ್ರಮ ವಹಿಸುವವನು ಕಾರ್ಮಿಕ. ಕಾರ್ಮಿಕರಿಗೆ ಒಂದು ಬದುಕಿನ ಅನಿವಾರ್ಯತೆ ಇರುತ್ತದೆ. ಅವನ ಬದುಕಿಗೆ ಒಂದು ಸ್ಪೂರ್ತಿ ಕೊಟ್ಟಾಗ ಅವನು ಮತ್ತಷ್ಟು ಉತ್ಸಾಹ ದಿಂದ ಕೆಲಸ ಮಾಡುತ್ತಾನೆ. ಹೀಗಾಗಿ ಕಾರ್ಮಿಕ ಇಲಾಖೆಯಿಂದ ನಿಧಿ ಇಡಲಾಗಿದೆ. ಆ ದುಡ್ಡು ನಮ್ಮ ಕಾರ್ಮಿಕರಿಗೆ ಅನುಕೂಲ ಆಗದಿದ್ದರೆ ಏನು ಪ್ರಯೋಜನ? ಇದನ್ನು ಮನಗಂಡು ನಮ್ಮ ಸಚಿವ ಶಿವರಾಮ್ ಹೆಬ್ಬಾರ್ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕ ಇಲಾಖೆಯಿಂದ 99 ಕೋಟಿ ರೂ. 2. 90 ಲಕ್ಷ ಕಾರ್ಮಿಕರಿಗೆ ನೀಡಿದ್ದಾರೆ ಎಂದರು.
ದೇವರು ಎಲ್ಲಿದ್ದಾನೆ? ಅಂತಾ ರವಿಂದ್ರನಾಥ ಟ್ಯಾಗೊರ್ ಅವರಿಗೆ ಒಬ್ಬರು ಥಟ್ ಅಂತ ಪ್ರಶ್ನೆ ಕೇಳಿದರು. ಅದಕ್ಕೆ ಅವರು ಥಟ್ ಅಂತ ರೈತರ ಶ್ರಮದಲ್ಲಿ ಕಾರ್ಮಿಕರ ಬೆವರಲ್ಲಿ ಅಂತ ಹೇಳಿದ್ದರು. ಈ ದೇಶಕ್ಕೆ ಮೂರು ಸಮುದಾಯದ ಜನರು ಮುಖ್ಯರಾಗಿದ್ದಾರೆ. ರೈತರು, ಕಾರ್ಮಿಕರು, ಸೈನಿಕರು ಸಂತೋಷವಾಗಿದ್ದರೆ ದೇಶ ಸಮೃದ್ದವಾಗಿರುತ್ತದೆ ಎಂದರು.
ಎಲ್ಲ ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಪಾಸ್: ಹುಬ್ಬಳ್ಳಿಯಲ್ಲಿ ಬೆಳಗ್ಗೆ ಬಸ್ ಸ್ಟ್ಯಾಂಡ್ ಹತ್ತಿರ ಹೋದರೆ ಕನಿಷ್ಠ. 30-40 ಸಾವಿರ ಕಾರ್ಮಿಕರು ಬರುತ್ತಾರೆ. ಅವರು ದೂರದ ಊರುಗಳಿಂದ ಬರುತ್ತಾರೆ. ಅವರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದೆ. ಇದರಿಂದ ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೇ 60 ಸಾವಿರ ಬಸ್‍ಪಾಸ್ ನೀಡಿದ್ದಾರೆ. ಪ್ರತಿ ತಾಲೂಕಿನಲ್ಲಿ 20-30 ಸಾವಿರ ಜನರಿರುತ್ತಾರೆ. ಎಲ್ಲ ಊರುಗಳಲ್ಲಿ ಕಟ್ಟಡ ಕಾರ್ಮಿಕರು ಎಷ್ಟು ಜನ ಇದ್ದಾರೆ. ಅವರಿಗೆ ಎಲ್ಲರಿಗೂ ಬಸ್ ಪಾಸ್ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಓದಿ: ಪೀಣ್ಯ ಎಲಿವೇಟೆಡ್ ರಸ್ತೆ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣ: ಸಿಎಂ ಬಸವರಾಜ ಬೊಮ್ಮಾಯಿ