ಬೆಂಗಳೂರು: ವೀಕೆಂಡ್ ಕರ್ಫ್ಯೂ ಸೋಮವಾರದಿಂದಲೂ ಮುಂದುವರೆಸಿದ್ರೆ ಒಳ್ಳೆಯದು ಎಂಬ ಅಭಿಪ್ರಾಯ ಸರ್ಕಾರಕ್ಕೂ ಇದೆ. ಆದರೆ ಜನ ಬೇಡ ಅಂತ ಹೇಳ್ತಿದಾರೆ. ಎಲ್ಲವೂ ಮಾಮೂಲಾಗಿರ್ಬೇಕು. ಆರಾಮಾಗಿರ್ಬೇಕು. ಸಾಯ್ತಾ ಇರೋರು ಸಾಯಲಿ ಅಂತ ಮಾತಾಡಿದ್ರೆ ನಾವೇನು ಮಾಡಲಾಗುತ್ತೆ. ಎಲ್ಲರೂ ಜವಾಬ್ದಾರಿಯುತವಾಗಿರ್ಬೇಕು. ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ದೊಮ್ಮಲೂರು ಕೋವಿಡ್ ಕಂಟ್ರೋಲ್ ರೂಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಆಸ್ಪತ್ರೆಗಳನ್ನು ರಾತ್ರೋರಾತ್ರಿ ಸಿದ್ಧ ಮಾಡಲು ಸಾಧ್ಯವಿಲ್ಲ. ವೆಂಟಿಲೇಟರ್, ಐಸಿಯು, ಆಕ್ಸಿಜನ್ ಲೈನ್ ಹಾಕಲು, ಡಾಕ್ಟರ್, ನರ್ಸ್ಗಳನ್ನು ನೇಮಿಸಲು ಕಡಿಮೆ ಅಂದ್ರೂ 15 ದಿನ ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ಮುಂದಿನ 14 ದಿನ ರಾತ್ರಿ ವೇಳೆ, ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗಬೇಕು.
ಯುವ ಜನರೂ ಎಚ್ಚರಿಕೆಯಿಂದಿರಿ!
ಉಳಿದ ಹೊತ್ತಲ್ಲಿಯೂ ಲಾಕ್ಡೌನ್ ಮಾಡಿದ್ರೆ ಕಳೆದ ಬಾರಿಯಂತೆ ಆಗುತ್ತದೆ. ಎಲ್ಲಾ ಕಡೆ ವೈದ್ಯರು, ನರ್ಸ್, ಸಿಬ್ಬಂದಿ ಪಾಸಿಟಿವ್ ಆಗುತ್ತಿದ್ದಾರೆ. ನಿನ್ನೆ 32 ವರ್ಷದ ಆಫೀಸರ್ ಒಬ್ಬರು ಸತ್ತಿದ್ದಾರೆ. ಈಗ ಮೊದಲ ಥರದ ಪರಿಸ್ಥಿತಿ ಇಲ್ಲ. 40 ವರ್ಷದ ಕೆಳಗಿನವರಿಗೂ ಎಫೆಕ್ಟ್ ಆಗ್ತಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ಈಗಾಗಲೇ ಕೊರೊನಾ ಪೀಕ್ಗೆ ಹೋಗಿದೆ. ಇನ್ನೂ ಕಡಿಮೆಯಾಗಬಹುದೆಂಬ ನಿರೀಕ್ಷೆ ಇದೆ. ಎಲ್ಲಾ ಕಡೆ ಸಿಸಿಸಿ ಕೇಂದ್ರದಲ್ಲಿ ಶೇ. 10ರಷ್ಟು ಬೇಸಿಕ್ ಮೆಡಿಕಲ್ ಆಕ್ಸಿಜನ್ ಲಭ್ಯವಾಗುವ ಹಾಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಆಮ್ಲಜನಕ ಕೊರತೆ ಇಲ್ಲ ಸಪ್ಲೈ ಸಮಸ್ಯೆ ಅಷ್ಟೇ!
ರಾಜ್ಯದಲ್ಲಿ ಆಮ್ಲಜನಕ ಕೊರತೆ ಇಲ್ಲ. ಆಸ್ಪತ್ರೆಗಳಲ್ಲಿ ಕೊರತೆ ಆಗಿದೆ. ಇದು ಪೂರೈಕೆಯಲ್ಲಿ ಸಮಸ್ಯೆ ಆಗಿರೋದು. ಚಿಕ್ಕ ಚಿಕ್ಕ ಆಸ್ಪತ್ರೆಗಳಲ್ಲಿ ಸಂಗ್ರಹಿಸಿಡಲು ಆಕ್ಸಿಜನ್ ಪ್ಲಾಂಟ್ಸ್, ಸ್ಟೋರೇಜ್ ವ್ಯವಸ್ಥೆ ಸರಿಯಾಗಿ ಇಲ್ಲ. ಇದರಿಂದ ಸಮಸ್ಯೆ ಆಗ್ತಿದೆ. ಸಪ್ಲೈ ಸಮಸ್ಯೆ ಅಷ್ಟೇ ಆಗ್ತಿದೆ ಎಂದರು.
ಪಾಸಿಟಿವ್ ಬಂದ್ರೆ ಮನೆಯಲ್ಲೇ ಇರಿ
ರಾಜ್ಯದ ಜನ ಎಚ್ಚರಿಕೆಯಿಂದ ಇರಬೇಕು. ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ಹೋಗಬೇಡಿ. ಮನೆಯಲ್ಲೇ ಐಸೋಲೇಟ್ ಆಗಿ. ಅಗತ್ಯ ಇದ್ರೆ ಮಾತ್ರ ಹೊರಗೆ ಹೋಗಬೇಕು. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದರು.
ಇನ್ನು ಕೋವಿಡ್ ಕಂಟ್ರೋಲ್ ರೂಂ ಪರಿಶೀಲನೆ ವೇಳೆ ಸ್ಯಾಂಪಲ್ ಕೊಟ್ಟ ನಾಗರಿಕರೊಬ್ಬರು ಕೇಂದ್ರಕ್ಕೆ ಪರಿಶೀಲನೆಗಾಗಿ ಬಂದಿದ್ದರು. ಸ್ಯಾಂಪಲ್ ಕೊಟ್ಟ ಮೇಲೆ ಮನೆಯಲ್ಲೇ ಇರಬೇಕು. ಅಲ್ಲಿ ಇಲ್ಲಿ ಓಡಾಡಬಾರದೆಂದು ಮುಖ್ಯ ಕಾರ್ಯದರ್ಶಿ ಹಾಗೂ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಗರಂ ಆಗಿದ್ರು. ಆದ್ರೆ 20 ತಾರೀಖಿಗೆ ಟೆಸ್ಟ್ ಕೊಟ್ಟಿದ್ರೂ ಇನ್ನೂ ವರದಿ ಬಂದಿಲ್ಲ ಎಂದು ತಿಳಿಸಿದಾಗ, ತಕ್ಷಣ ಪರಿಶೀಲಿಸಲು ತಿಳಿಸಿದರು. ಅಲ್ಲದೆ ನೆಗೆಟಿವ್ ರಿಪೋರ್ಟ್ ಬಂದಿರುವ ವಿವರವನ್ನು ಆಸ್ಪತ್ರೆ ಮುಂಭಾಗದಲ್ಲಿ ಪ್ರಕಟಿಸಿರಬೇಕು ಎಂದು ಸೂಚಿಸಿದರು.