ಬೆಂಗಳೂರು: ಮೋಜು, ಮಸ್ತಿ ನಡೆಸಲು 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮನೋರ್ವನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಸುಹೈಲ್ ಬಂಧಿತ ಆರೋಪಿ. ಈತನಿಂದ 19 ಲಕ್ಷ ರೂ. ಮೌಲ್ಯದ 338 ಗ್ರಾಂ ಚಿನ್ನ ಹಾಗೂ 3 ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ರಾಮಮೂರ್ತಿ ನಗರ ಠಾಣೆಯಲ್ಲಿ ಈತನ ವಿರುದ್ಧ 9 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಹೆಣ್ಣೂರು, ಬನಶಂಕರಿ, ಹೆಬ್ಬಾಳ, ಕೆ.ಆರ್.ಪುರಂ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 30ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ವಿವಾಹಿತನಾಗಿದ್ದ ಆರೋಪಿ ಒಬ್ಬಂಟಿಯಾಗಿ ಸರಗಳ್ಳತನ ಕೃತ್ಯ ಎಸಗುತ್ತಿದ್ದ. ಈಗಾಗಲೇ ಮೂರು ಬಾರಿ ಜೈಲಿಗೆ ಹೋಗಿ ಬಂದಿರುವ ಈತ, ಬಳಿಕ ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಈತನ ವಿರುದ್ಧ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು.
ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ತನ್ನ ಕೈ ಚಳಕ ತೋರಿಸಿದ್ದ ಸುಹೈಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಮೆಲ್ವಿನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.