ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ರಾಜ್ಯ ರಾಜಕೀಯ ವಿದ್ಯಮಾನಗಳು ಹಾಗು ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಸಿಎಂ ದೆಹಲಿ ಪ್ರವಾಸಕ್ಕೂ ಮುನ್ನವೇ ನಡೆಯುತ್ತಿರುವ ಈ ಭೇಟಿ ಸಾಕಷ್ಟು ಕುತೂಹಲ ಮೂಡುವಂತೆ ಮಾಡಿದೆ.
ಭಾರತೀಯ ವಾಯುಪಡೆ ವಿಮಾನದ ಮೂಲಕ ಇಂದು ರಾತ್ರಿ 11 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಅಮಿತ್ ಶಾ ಅವರನ್ನು ಸ್ವಾಗತಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ 11.30ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳರುವ ಅಮಿತ್ ಶಾ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 11 ರಿಂದ 12.30 ರವರೆಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆಯಿಂದ ನಡೆಯಲಿರುವ ಸಂಕಲ್ಪ ಸಿದ್ದಿ ಸಮಾವೇಶದ ಮೂರನೇ ಆವೃತ್ತಿಯಲ್ಲಿ ಭಾಗಿಯಾಗಲಿದ್ದಾರೆ.
ಸಿಎಂ ಬೊಮ್ಮಾಯಿ-ಅಮಿತ್ ಶಾ ಲಂಚ್ ಮೀಟ್.. ನಾಳೆ ಮಧ್ಯಾಹ್ನ 1 ರಿಂದ 2 ಗಂಟೆವರೆಗೆ ಭೋಜನಕ್ಕಾಗಿ ಸಮಯವನ್ನು ಕಾಯ್ದಿರಿಸಿದ್ದು, ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಲಂಚ್ ಮೀಟಿಂಗ್ ನಡೆಸಲಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣ ಕುರಿತು ವಿಸ್ತೃತವಾದ ಮಾತುಕತೆ ನಡೆಸಲಿದ್ದಾರೆ. ಸ್ವಪಕ್ಷೀಯ ಕಾರ್ಯಕರ್ತರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಹಿನ್ನೆಲೆ ಅಮಿತ್ ಶಾ ಖುದ್ದಾಗಿ ಈ ವಿಷಯದಲ್ಲಿ ರಂಗಪ್ರವೇಶ ಮಾಡಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲಿದ್ದಾರೆ ಎನ್ನುವ ಕಾರಣದಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ.
ಒಂದು ನಿರ್ಧಾರ ಹೊರಬರಲಿದೆ: ಇದರ ಜೊತೆಗೆ ರಾಜ್ಯ ರಾಜಕೀಯ ವಿದ್ಯಮಾನಗಳು, ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ. ಆಗಸ್ಟ್ 6 ರಂದು ಸಿಎಂ ದೆಹಲಿಗೆ ತೆರಳುತ್ತಿದ್ದು, ಅದಕ್ಕೂ ಮುನ್ನವೇ ಅಮಿತ್ ಶಾ ಜೊತೆ ಮಾತುಕತೆ ನಡೆಸಲು ಅವಕಾಶ ಸಿಗುತ್ತಿರುವುದರಿಂದ ಈ ಬಾರಿ ಸಂಪುಟ ವಿಚಾರದಲ್ಲಿ ಒಂದು ನಿರ್ಧಾರ ಹೊರಬರಲಿದೆ ಎನ್ನಲಾಗುತ್ತಿದೆ. ಲಂಚ್ ಮೀಟ್ ಮುಗಿಸಿದ ನಂತರ 2.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ಅಮಿತ್ ಶಾ ವಾಪಸಾಗಲಿದ್ದಾರೆ.
ಓದಿ: ಭಟ್ಕಳಕ್ಕೆ ಸಿಎಂ ಬೊಮ್ಮಾಯಿ ತುರ್ತು ಭೇಟಿ: ಮಳೆಹಾನಿ ಕುರಿತು ಅವಲೋಕನ