ಬೆಂಗಳೂರು: ಪ್ರಧಾನಮಂತ್ರಿ ಅವಾಸ್ ಯೋಜನೆಯಲ್ಲಿನ ಕಳಪೆ ಸಾಧನೆಗೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರದ ಕಳಪೆ ಸಾಧನೆಗೆ ಕೇಂದ್ರ ಎಚ್ಚರಿಕೆ ನೀಡಿದ್ದು, ವಸತಿ ಯೋಜನೆಯಡಿ ಆಯ್ಕೆಯಾಗಿರುವ 41 ಸಾವಿರ ಮನೆ ನಿರ್ಮಿಸಬೇಕು. ಆದರೆ ಒಂದು ವರ್ಷದಲ್ಲಿ ಕಟ್ಟಿದ್ದು ಕೇವಲ 21 ಮನೆ ಮಾತ್ರ. ವಸತಿ ರಹಿತರಿಗೆ ಸೂರು ಕಲ್ಪಿಸುವ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ನಿಗದಿತ ಗುರಿ ಮುಟ್ಟದಿದ್ದರೆ ಅನುದಾನ ಕಡಿತದ ಎಚ್ಚರಿಕೆ ನೀಡಿದೆ.
![central-government-warns-state-government](https://etvbharatimages.akamaized.net/etvbharat/prod-images/6347220_med.jpg)
2019-20ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳು 41350. ಇಲ್ಲಿಯವರೆಗೆ ಕೇವಲ 21 ಮನೆಗಳು ಮಾತ್ರ ನಿರ್ಮಾಣವಾಗಿವೆ. 39697 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. ಫೆಬ್ರವರಿಯಲ್ಲಿ ನಡೆದ ಎಂಪವರ್ಮೆಂಟ್ ಕಮಿಟಿಯಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ. ರಾಜ್ಯ ಸರ್ಕಾರದ ಕಳಪೆ ಸಾಧನೆ ಬಗ್ಗೆ ಕೇಂದ್ರ ಅಸಮಾಧಾನ ಹೊರ ಹಾಕಿದೆ.
ಜೂನ್ 20ರ ಒಳಗೆ ಎಲ್ಲಾ ಮನೆ ಪೂರ್ಣಗೊಳಿಸುವಂತೆ ತಾಕೀತು ಮಾಡಿರುವ ಕೇಂದ್ರ ಸರ್ಕಾರ, ನಿಗದಿತ ವೇಳೆಗೆ ಕೆಲಸ ಮಾಡದಿದ್ದರೆ ಮುಂದೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಸರಿಯಾಗಿ ಜಾರಿ ಮಾಡದಿರುವುದು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಯೋಜನೆಗೆ ವೇಗ ಕೊಡುವುದು ಕೂಡ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ವಿ.ಸೋಮಣ್ಣಗೆ ಈ ಸಂಬಂಧ ಯಾವ ರೀತಿ ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.