ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರವಾಗಿ ಯುವತಿ ಬಿಡುಗಡೆ ಮಾಡಿರುವ ಹೊಸ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಡರಾತ್ರಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಗ್ರಪ್ಪ, ಅಶೋಕ ಪಟ್ಟಣ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಇದೇ ಸಂದರ್ಭ ಸಿಡಿ ವಿಚಾರವಾಗಿಯೂ ಚರ್ಚೆ ನಡೆದಿದೆ.
ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ, ಕಾಂಗ್ರೆಸ್ ನಾಯಕರು ಆಡಿಯೋ ಬಿಡುಗಡೆ ಬೆನ್ನಲ್ಲೇ ಕದ್ದಾಲಿಕೆ ಭಯ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಇದೇ ವಿಷಯವನ್ನು ಬಿಜೆಪಿಯವರು ಪ್ರಮುಖವಾಗಿ ಪ್ರಸ್ತಾಪ ಮಾಡಬಹುದು. ಇಷ್ಟು ದಿನ ಕೇಸ್ ನಮ್ಮ ಪರ ಇತ್ತು, ಒಂದೇ ದಿನದಲ್ಲಿ ಬಿಜೆಪಿ ಪರ ಹೋಯಿತು. ಬೆಳಗಾವಿ ಬೈ ಎಲೆಕ್ಷನ್ ಮೇಲೆ ಭಾರಿ ಪರಿಣಾಮ ಬೀರಬಹುದು ಎಂಬೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ನಿನ್ನೆ ಬಿಡುಗಡೆ ಮಾಡಿರುವ 6 ನಿಮಿಷ 59 ಸೆಕೆಂಡ್ಗಳ ವಿಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಸಹ ಪ್ರಸ್ತಾಪವಾಗಿದೆ. ಯುವತಿ ತನ್ನ ತಂದೆ-ತಾಯಿ ವಿಚಾರವಾಗಿ ಮಾತನಾಡಿದ ಸಂದರ್ಭ ರಾಜ್ಯದ ನಾಯಕರೊಬ್ಬರ ಹೆಸರು ಪ್ರಸ್ತಾಪವಾಗಿದೆ. ಇದೀಗ ಈ ವಿಚಾರ ಇಡೀ ಪ್ರಕರಣಕ್ಕೆ ತಿರುವು ನೀಡುವ ಸಾಧ್ಯತೆಗಳು ಗೋಚರಿಸುತ್ತಿವೆ.
ಪ್ರತಿಕ್ರಿಯೆಗೆ ನಕಾರ...
ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಸಿದ್ದರಾಮಯ್ಯ ನಿವಾಸದಿಂದ ತೆರಳಿದ ಕಾಂಗ್ರೆಸ್ ನಾಯಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಆಗಿದೆ ಎಂದ ತಕ್ಷಣ ನೋ ರಿಯಾಕ್ಷನ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೆಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಸವಕಲ್ಯಾಣ ಚುನಾವಣೆ ಬಗ್ಗೆ ಚರ್ಚೆ ಮಾಡಲು ಆಗಮಿಸಿದ್ದೆ. ಮಂಗಳವಾರ ಮಲ್ಲಮ್ಮ ನಾಮಪತ್ರ ಸಲ್ಲಿಕೆ ಮಾಡ್ತಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬರುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದೆ. ಬಸವಕಲ್ಯಾಣದಲ್ಲಿ ಮಲ್ಲಮ್ಮ ಗೆಲುವು ಖಚಿತ. ನಾರಾಯಣ ರಾವ್ ಕೆಲಸ ಮತ್ತು ಒಳ್ಳೆಯತನ ಕೈ ಹಿಡಿಯುತ್ತೆ. ಈಗಾಗಲೇ ಅಭ್ಯರ್ಥಿ ಕೆಲಸ ಶುರು ಮಾಡಿದ್ದಾರೆ. ಬಿಜೆಪಿ ಟಿಕೆಟ್ ಮಾರಾಟ ಆಗಿದೆ ಎಂದು ಬಿಜೆಪಿ ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದರು.