ಬೆಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಗಿರಾಕಿಗಳಿಗೆ, ಸಾಫ್ಟ್ವೇರ್ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಗಾಂಜಾ ಮಾರಾಟ ಮಾಡಲು ತಯಾರಿ ನಡೆಸಿದ್ದ ಆರೋಪಿಗಳ ಮೇಲೆ ಸಿಸಿಬಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದೆ.
ಅಂತಾರಾಷ್ಟ್ರೀಯ ಕುಖ್ಯಾತ ಪೆಡ್ಲರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುದೆಯುದೆಜಿಯಾ, ಪುರುಷೋತ್ತಮ್, ಆನಂದ್ ಚಂದ್ರನ್ ಬಂಧಿತ ಆರೋಪಿಗಳು. ನಗರ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಅಧಿಕಾರಿಗಳಿಗೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಕೃಷ್ಣ ಬಿಲ್ಡಿಂಗ್ ಮುಂಭಾಗ ಕಾರಿನಲ್ಲಿ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಈ ಮೂಲಕ ಕಾರ್ಯಾಚರಣೆ ಕೈಗೊಂಡ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಗಾಂಜಾವನ್ನು ವಿದೇಶದಿಂದ ತರಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗುತ್ತಿದೆ.
ಬಂಧಿತರಿಂದ 5 ಲಕ್ಷ ಮೌಲ್ಯದ 100 ಗ್ರಾಂ ಮಾದಕವಸ್ತು, ಒಂದು ಕಾರು, ಒಂದು ದ್ವಿಚಕ್ರ ವಾಹನ, 3 ಮೊಬೈಲ್ ಫೋನ್, ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುದೆಯುದೆಜಿಯಾ ಎಂಬಾತ ನೈಜೀರಿಯಾ ಮೂಲದವನಾಗಿದ್ದು, ಈತ ದೊಡ್ಡ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ. ಹಲವಾರು ಪ್ರತಿಷ್ಠಿತ ಪಾರ್ಟಿಗಳಿಗೆ ಈತ ಡ್ರಗ್ಸ್ ಪೂರೈಸುತ್ತಿದ್ದ ಎನ್ನಲಾಗ್ತಿದೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.