ಬೆಂಗಳೂರು : ನಗರದಲ್ಲಿ 300 ಮುಸ್ಲಿಂ ಮತಗಳನ್ನು ಬಿಜೆಪಿ ಪಡೆದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಹೊಸಕೋಟೆಯಲ್ಲಿ ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಅವರಿಗೆ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಇಂದು ಬೂತ್ ಮಟ್ಟದ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಪಕ್ಷ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಬುದ್ಧ ಜಯಂತಿ ನಿಲ್ಲಿಸಿದರು ಎಂದು ಅವರು ಪರೋಕ್ಷವಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಹರಿಹಾಯ್ದರು.
ಈಗಿನ ದಿನಗಳಲ್ಲಿ ಕೋಮುವಾದಿಗಳು ಟಿಪ್ಪುಸುಲ್ತಾನ್ ಬಗ್ಗೆ ಪಠ್ಯವೇ ಇರಬಾರದೆಂದು ತೀರ್ಮಾನಿಸಿದೆ. ಸಿದ್ದರಾಮಯ್ಯ ನಾವು ಕಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಂದರು ಎನ್ನುವ ವಿಚಾರಕ್ಕೆ ಮಾತನಾಡಿದ ಅವರು, ಇದೀಗ ಬಿಜೆಪಿಗೆ ಹೋಗಲು ಸಿದ್ದವಾಗಿರುವ ಎಂಟಿಬಿ ಅವರು ಕಟ್ಟಿದ ಪಕ್ಷವೇನಾ ಅದು ಎಂದು ಪ್ರಶ್ನಿಸಿದರು. ಈ ಉಪಚುನಾವಣೆಯಲ್ಲಿ ಎಂಟಿಬಿ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.