ಬೆಂಗಳೂರು : ಪೊಲೀಸ್ ಭದ್ರತೆಯಲ್ಲಿ ಇಂದು ಸಾರಿಗೆ ಬಸ್ ಸಂಚಾರ ಆರಂಭಿಸುವ ಹಾಗೂ ಪರವಾನಿಗೆ ರಹಿತವಾಗಿ ಖಾಸಗಿ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡುವ ಮಹತ್ವದ ನಿರ್ಧಾರವನ್ನು ಸಿಎಂ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಂಡಿದೆ.
ಸಿಎಂ ಜೊತೆ ಸಭೆ ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಇಂದು ಖಾಸಗಿ ಬಸ್‌ಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಯಾರ ಪ್ರತಿಷ್ಠೆಗೆ ನೀವು ಒಳಗಾಗಬಾರದು. ನಮ್ಮ ಜೊತೆಯಲ್ಲಿ ಮಾತನಾಡಿದ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದೇವೆ.
ಆದರೂ ಕೂಡ ಈ ರೀತಿ ಆಗುವಂಥದ್ದು ಸಾರಿಗೆ ನೌಕರರಿಗೆ ಅಪಚಾರ ಮಾಡಿದಂತೆ ಆಗುತ್ತದೆ ಅಂತಾ ಮುಖಂಡರಿಗೆ ನಾನು ತಿಳಿಸಲು ಇಷ್ಟಪಡುತ್ತೇನೆ. ಇಂದು ನಮ್ಮ ಎಲ್ಲಾ ಸಿಬ್ಬಂದಿ ವರ್ಗ ಕರ್ತವ್ಯಕ್ಕೆ ಹಾಜರಾಗಬಹುದು ಎಂಬ ಆಶಾಭಾವನೆಯನ್ನು ನಾನು ಕೊಟ್ಟಿದ್ದೇನೆ, ಯಾರದೇ ವೈಯಕ್ತಿಕ ಹಿತಾಸಕ್ತಿ ಇದಾಗಬಾರದು ಎಂದರು.
ಇಂದು ಜನ ಪ್ರಯಾಣಿಸಲು ಬರಬಹುದು. ಎಲ್ಲಾ ರೀತಿಯ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಯಾರಾದ್ರೂ ಸಂಚಾರಕ್ಕೆ ತಡೆ ಒಡ್ಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸಂಸ್ಥೆ ನಡೆಯಬೇಕು ಎನ್ನುವ ಆಶಯ ಸರ್ಕಾರಕ್ಕಿದೆ.
ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಹಳಷ್ಟು ನೌಕರರು ಕೂಡ ಸೇವೆಗೆ ಹಾಜರಾಗುವ ಭರವಸೆ ಕೊಟ್ಟಿದ್ದಾರೆ. ಸಾರಿಗೆ ನೌಕರರು ಸೇವೆ ಮಾಡಲು ಬಂದಲ್ಲಿ ಅವರಿಗೆ ಭದ್ರತೆ ಕೊಡುತ್ತೇವೆ. ಯಾರಾದ್ರೂ ತಡೆ ಒಡ್ಡಿದ್ರೆ ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ, ಅದರಲ್ಲಿ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ರು. ಎಸ್ಮಾ ಜಾರಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸ್ಥಿತಿಗತಿಯನ್ನು ನೋಡಿಕೊಂಡು ಎಸ್ಮಾ ಜಾರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ,ಸಂಧಾನ ಸಭೆಯಲ್ಲಿ ಒಪ್ಪಿಕೊಂಡಿದ್ದ ಚಂದ್ರಶೇಖರ್ಗೆ ಒತ್ತಡ ಇರುವಂತಿದೆ, ನಮಗೆ ಒತ್ತಡ ಮಾಡುತ್ತಿದ್ದಾರೆ ಎಂದು ಚಂದ್ರಶೇಖರ್ ಜೊತೆ ಇದ್ದ 6 ಜನರು ಈಗ ಇಲ್ಲಿ ಬಂದು ನಮಗೆ ಹೇಳಿದ್ದಾರೆ. ಅವರಲ್ಲಿಯೇ ಈಗ ಭಿನ್ನಮತ ಶುರುವಾಗಿದೆ. ಒಬ್ಬ ವ್ಯಕ್ತಿಗೋಸ್ಕರ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದರು.
ಕಷ್ಟದಲ್ಲಿದ್ದೇವೆ, ಕೊರೊನಾ ಇದೆ, ನೆರೆ ಹಾನಿ ಸಂಭವಿಸಿದೆ. ಯಾರಾದರೂ ಇಂತಹ ಸಂದರ್ಭದಲ್ಲಿ ಮುಷ್ಕರ ಮಾಡುತ್ತಾರಾ.. ಮುಷ್ಕರ ಮಾಡಲು ಪ್ರಚೋದನೆ ಮಾಡುತ್ತಾರಾ.. ಹೊಸ ವರ್ಷಾಚರಣೆ ಮಾಡಬೇಡಿ ಎಂದು ಕರೆ ನೀಡಿದ್ದೇವೆ. ಯಾಕೆಂದರೆ, ಇದು ಶೋಕಾಚರಣೆ ಮಾಡುವ ಸಂದರ್ಭ.
ಇಂತಹ ಸಂದರ್ಭವನ್ನು ಈ ರೀತಿ ಉಪಯೋಗಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಮಾನವೀಯತೆ ಇರುವಂತಹ ವ್ಯಕ್ತಿ ಈ ರೀತಿ ಮಾಡುವುದಿಲ್ಲ. ಕೋಡಿಹಳ್ಳಿ ಈ ರೀತಿ ಮಾಡಬಾರದಿತ್ತು. ಆದರೂ ದೇವರು ಅವರಿಗೆ ಒಳ್ಳೆಯದು ಮಾಡಲಿ. ರೋಗಿಗಳ ಕಷ್ಟವನ್ನು ಇಂತಹ ಸಂದರ್ಭದಲ್ಲಿ ಅರಿತುಕೊಳ್ಳದೆ ಇರುವವರಿಗೆ ಮನುಷ್ಯತ್ವ ಇದೆಯಾ? ಎಂದು ಪ್ರಶ್ನಿಸಿದರು. ಅವರಿಗೆ ಗೊತ್ತಿಲ್ಲದ ವಿಷಯ ಇದು. ಕಾರ್ಮಿಕ ಕಾಯ್ದೆಯ ಬಗ್ಗೆ ಅವರಿಗೆ ಏನೂ ಮಾಹಿತಿ ಇಲ್ಲ.
ಯಾವ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಬೇಕು ಎಂದು ನ್ಯಾಯಾಲಯದ ಆದೇಶಗಳು ಇವೆ. ಕೊರೊನಾ ನಂತರ ನಿಮ್ಮ ಬೇಡಿಕೆ ಪರಿಗಣಿಸುವ, ಪರಿಶೀಲನೆ ಮಾಡುವ ಚಿಂತನೆ ನಡೆಸುತ್ತೇವೆ. ದಯವಿಟ್ಟು ಮುಷ್ಕರವನ್ನು ನಿಲ್ಲಿಸಿ ನಿರ್ಧಾರವನ್ನು ಬದಲಿಸಿ. ಸಾರಿಗೆ ಸಂಸ್ಥೆಗಳ ಬುಡಕ್ಕೆ ಡೈನಾಮೈಟ್ ಇಡಬೇಡಿ, ಕಷ್ಟಪಟ್ಟು ಕಟ್ಟಿರುವ ಸಂಸ್ಥೆಗಳನ್ನು ಉಳಿಸಿ ಎಂದು ಮನವಿ ಮಾಡಿದರು.
ಪ್ರಯಾಣಿಕರ ಒಂದು ತೊಟ್ಟು ರಕ್ತ ಬಿದ್ದರೂ ಪರಪ್ಪನ ಅಗ್ರಹಾರ ಗತಿ : ನಾವು ಸಾರ್ವಜನಿಕರ ಪರವಾಗಿದ್ದೇವೆ. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಮಾಡಿದ್ರೆ ಎಲ್ಲಿ ಬೇಕೋ ಅಲ್ಲಿ ಬುದ್ಧಿ ಕಲಿಸುತ್ತೇವೆ. ಎಲ್ಲಿಯಾದ್ರೂ ಕಲ್ಲು ತೂರಾಟ ಮಾಡಿದ್ರೆ, ಜನರಿಗೆ ಒಂದು ಸಣ್ಣ ಗಾಯವಾದ್ರೂ, ಒಂದು ತೊಟ್ಟು ರಕ್ತ ಹರಿದ್ರೂ ಬಿಡುವುದಿಲ್ಲ. ಪರಪ್ಪನ ಅಗ್ರಹಾರಕ್ಕೆ ಕಳಿಸುತ್ತೇವೆ. ಇಂದು ಖಾಸಗಿ ವಾಹನಗಳು ಅಥವಾ ಯಾವುದೇ ರೀತಿಯ ವಾಣಿಜ್ಯ ಸಾರಿಗೆ ಇರಬಹುದು ಅವುಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
ಅವರೆಲ್ಲ ಸಾರ್ವಜನಿಕರಿಗೆ ಸೇವೆ ಸಲ್ಲಿಸಬಹುದು. ಯಾವುದೇ ಪರವಾನಿಗೆಯ ಅಗತ್ಯವಿಲ್ಲ. ಜೊತೆಗೆ ನಮ್ಮ 4 ನಿಗಮದ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳುತ್ತೇವೆ. ಯಾರ್ ಯಾರು ಕೆಲಸಕ್ಕೆ ಬರುತ್ತಾರೋ ಅವರಿಗೆ ಎಲ್ಲ ರೀತಿಯ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಿದ್ಧವಿದೆ.
ಪೊಲೀಸರನ್ನು ನಿಯೋಜಿಸಿ ಬಸ್‌ಗಳ ಸಂಚಾರ ಮಾಡುತ್ತೇವೆ. ಸಾರ್ವಜನಿಕರಿಗೆ ತೊಂದರೆ ಕೊಡುವ ದುಷ್ಟ ಶಕ್ತಿಗಳ ವಿರುದ್ಧ ನಾವು ಕೆಲಸ ಮಾಡುತ್ತೇವೆ ಎಂದರು. ಇಂದು ಬೆಳಗ್ಗೆ 9.30ಕ್ಕೆ ಮತ್ತೆ ಸಿಎಂ ನಿವಾಸದಲ್ಲಿ ಸಭೆ ನಡೆಯಲಿದೆ. ಮುಂದಿನ ವ್ಯವಸ್ಥೆ ಬಗ್ಗೆ ಮತ್ತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.