ಬೆಂಗಳೂರು: ಆತುರದ ನಿರ್ಧಾರ ಕೈಗೊಳ್ಳದೇ ಕಾದು ನೋಡುವ ತಂತ್ರಕ್ಕೆ ಬಿಜೆಪಿ ನಾಯಕರು ನಿರ್ಧರಿಸಿದ್ದು, ತರಾತುರಿಯಲ್ಲಿ ರಾಜಭವನದ ಮೆಟ್ಟಿಲೇರದಿರುವ ನಿರ್ಣಯಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎನ್ನಲಾಗಿದೆ.
ತುಮಕೂರು ಪ್ರವಾಸಕ್ಕೂ ಮುನ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಆಪ್ತ ಶಾಸಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಾಲೋಚನೆ ನಡೆಸಿದರು.
ಮಾಜಿ ಡಿ.ಸಿ.ಎಂ ಆರ್.ಅಶೋಕ್, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ವಿ. ಸೋಮಣ್ಣ, ರೇಣುಕಾಚಾರ್ಯ, ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಆಪ್ತ ಶಾಸಕರೊಂದಿಗೆ ಯಡಿಯೂರಪ್ಪ ಮಾತುಕತೆ ನಡೆಸಿದರು.
ಕಳೆದ ರಾತ್ರಿಯೂ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದ ಬಿಎಸ್ವೈ ಬೆಳಗ್ಗೆ ಕೂಡ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬವಾದರೆ ಬಿಜೆಪಿ ನಡೆ, ರಾಜ್ಯಪಾಲರ ಭೇಟಿ ಮಾಡಬೇಕೋ ಬೇಡವೋ ಎನ್ನುವ ಕುರಿತು ಚರ್ಚೆ ನಡೆಸಿದ್ದಾರೆ. ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ, ಅಂದಿನಂತೆ ಮೂರು ದಿನ ಮುಖ್ಯಮಂತ್ರಿ ಆಗಿ ಬಹುಮತ ಸಾಬೀತುಪಡಿಸಲಾಗದೇ ಮುಜುಗರಕ್ಕೆ ಸಿಲುಕಿದ ಸ್ಥಿತಿ ಮತ್ತೆ ಮರುಕಳಿಸಬಾರದು ಹಾಗಾಗಿ ಶಾಸಕರ ರಾಜೀನಾಮೆ ಅಂಗೀಕಾರದ ನಂತರವಷ್ಟೇ ಬಿಜೆಪಿ ಸರ್ಕಾರ ರಚನೆ ಕಸರತ್ತಿನಲ್ಲಿ ತೊಡಗಬಹುದು ಎನ್ನುವ ನಿಲುವಿಗೆ ಬಿಎಸ್ವೈ ಬಂದಿದ್ದಾರೆ ಎನ್ನಲಾಗಿದೆ.