ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಇದನ್ನು ಖಂಡಿಸಿ ಹಾಗು ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ವಿರೋಧಿಸಿ ತಿಂಗಳಾಂತ್ಯಕ್ಕೆ ಮೂರು ದಿನ ಸರ್ಕಾರದ ವಿರುದ್ಧ ಧರಣಿ ನಡೆಸಲಿದ್ದು ಬೆಳಗಾವಿ ಅಧಿವೇಶನದಲ್ಲಿಯೂ ಈ ವಿಚಾರವನ್ನು ಇರಿಸಿಕೊಂಡು ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಆರ್.ಆರ್. ನಗರದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳ ವೀಕ್ಷಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುನಿರತ್ನ ವಿರುದ್ಧ ಈ ರೀತಿಯ ಸೇಡಿನ ರಾಜಕಾರಣ ಸರಿಯಲ್ಲ. ಆಡಳಿತ ಪಕ್ಷ ನಮ್ಮ ಶಾಸಕ ಮುನಿರತ್ನ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರಾಗಿ ಅರ್ಧಂಬರ್ಧ ಕೆಲಸ ಆಗಿ ನಿಲ್ಲಿಸುವ ಮೂಲಕ ಒಂದು ರೀತಿಯ ಗೊಂದಲದ ವಾತಾವರಣ ನಿರ್ಮಾಣ ಮಾಡಿದೆ. ಈ ಭಾಗದ ಅಭಿವೃದ್ಧಿಗೆ ಸರ್ಕಾರ ಕೊಡಲಿ ಪೆಟ್ಟು ನೀಡಿದೆ ಎಂದು ಆರೋಪಿಸಿದರು.
ಕೇವಲ ಈ ಕ್ಷೇತ್ರ ಮಾತ್ರವಲ್ಲ, ಎಲ್ಲಾ ಕಡೆ ಗುತ್ತಿಗೆದಾರರು ಕೆಲಸ ಮಾಡಲು ಸಿದ್ಧರಿಲ್ಲ. ಸರ್ಕಾರ ಗುತ್ತಿಗೆದಾರರಿಗೆ ಹಣ ಕೊಡುತ್ತಿಲ್ಲ, ಏಳರಿಂದ ಎಂಟು ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ. ಹೀಗಾಗಿ ಯಾವುದೇ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಈ ರೀತಿಯ ವಾತಾವರಣ ಇಡೀ ರಾಜ್ಯದಲ್ಲಿ ಇದೆ. ಈ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸುತ್ತೇನೆ. ಹಾಗಾಗಿ ಮೂರು ದಿನ ವಿಧಾನಸೌಧದ ಮುಂದೆ ಅಥವಾ ಫ್ರೀಡಂ ಪಾರ್ಕ್ನಲ್ಲಿ ಸತ್ಯಾಗ್ರಹ ಮಾಡುತ್ತೇವೆ. ಸಾವಿರಾರು ಜನ ಸೇರಿ ಸರ್ಕಾರದ ನೀತಿಯ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ದಿನಾಂಕವನ್ನು ನಾಳೆ ನಿಗದಿ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿರುವ ಈ ರೀತಿಯ ಸೇಡಿನ ರಾಜಕಾರಣವನ್ನು ನಾವು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ರಸ್ತೆಗಳಿಗೆ ಹಣ ಮಂಜೂರಾಗಿದ್ದರು ಸಹ ಕೆಲಸ ಮಾಡಲು ಬಿಡುತ್ತಿಲ್ಲ ಎಂದರೆ ಸೇಡಿನ ರಾಜಕಾರಣವಲ್ಲದೆ ಮತ್ತೇನು ಅಲ್ಲ. ಮುಂದಾದರು ಈ ರೀತಿ ವೈಯಕ್ತಿಕ ದ್ವೇಷ ಮಾಡದೆ ಅಭಿವೃದ್ಧಿ ಕಾರ್ಯದ ಕಡೆ ಗಮನ ಹರಿಸಬೇಕು, ಪ್ರತ್ಯಕ್ಷವಾಗಿ ಏನಾಗಿದೆ ಎಂದು ನಾನು ಸ್ಥಳಕ್ಕೆ ಬಂದು ನೋಡಿದ್ದೇನೆ. ಇದನ್ನು ಸರ್ಕಾರದ ಗಮನಕ್ಕೂ ತರುತ್ತೇನೆ. ಸತ್ಯಾಗ್ರಹ ಹೋರಾಟದ ಮೂಲಕ ಈ ಕ್ಷೇತ್ರದ ಕೆಲಸ ಆಗುವಂತೆ ಮಾಡುತ್ತೇನೆ. ಆರ್ ಆರ್ ನಗರ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದ ವಿಚಾರಗಳನ್ನು ಇಟ್ಟುಕೊಂಡು ಸತ್ಯಾಗ್ರಹ ಮಾಡುತ್ತೇವೆ. ಎಲ್ಲರ ಜೊತೆ ಸಮಾಲೋಚನೆ ನಡೆಸಿ ಈ ತಿಂಗಳ ಕಡೆಗೆ ವಿಧಾನಸೌಧ ಅಥವಾ ಫ್ರೀಡಂ ಪಾರ್ಕ್ ಮುಂದೆ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಯಡಿಯೂರಪ್ಪ ಎಚ್ಚರಿಕೆ ರವಾನಿಸಿದರು.
ಇಡೀ ರಾಜ್ಯದಲ್ಲಿ ಯಾವುದೇ ಗುತ್ತಿಗೆದಾರರು ಕೆಲಸ ಮಾಡಲು ಬರುತ್ತಿಲ್ಲ ಶೇಕಡ ಏಳರಿಂದ ಎಂಟುರಷ್ಟು ಕಮಿಷನ್ ಕೇಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಮುಂದುವರಿಸಲು ಬಿಡದೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ನಾವು ಪ್ರತಿಭಟನೆ ಮಾಡುತ್ತೇವೆ. ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುವ ಮೊದಲೇ ನಾವು 3 ದಿನ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸವನ್ನು ಮಾಡುತ್ತೇವೆ. ಸಾಂಕೇತಿಕವಾಗಿ ಧರಣಿ ಮಾಡುತ್ತೇವೆ ನಂತರ ಸದನದ ಒಳಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಆರ್ ಆರ್ ನಗರ ಕ್ಷೇತ್ರಕ್ಕೆ ಮಂಜೂರಾಗಿದ್ದ 126 ಕೋಟಿ ಅನುದಾನವನ್ನು ವಾಪಸ್ಸು ಪಡೆದು ಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಿರುವ ಕುರಿತು ಮುನಿರತ್ನ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದೆ. ಆದರೆ ಯಾರು ನನಗೆ ಸಿಕ್ಕಿಲ್ಲ ಯಾರೊಂದಿಗೂ ಮಾತನಾಡಲು ಸಾಧ್ಯವಾಗಿಲ್ಲ. ಹಾಗಾಗಿ ಹೋರಾಟ ಮಾಡುವುದು ಅನಿವಾರ್ಯ ಕಾಮಗಾರಿ ಸ್ಥಗಿತಗೊಳಿಸಿರುವುದು ಕಮಿಷನ್ ಪಡೆಯುತ್ತಿರುವುದು ಎಲ್ಲವನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇನೆ. ಬೆಳಗಾವಿ ಅಧಿವೇಶನದಲ್ಲಿಯೂ ಸುದೀರ್ಘವಾಗಿ ಚರ್ಚೆ ಮಾಡಲು ಶಾಸಕರಿಗೆ ಸೂಚಿಸುತ್ತೇನೆ.
ಮುಂದುವರೆದು, ದೀಪಾವಳಿ ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ಕಡೆ ಬರುವ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪನವರು, ಯಾರು ಎಲ್ಲಿಗೆ ಬೇಕಾದರೂ ಹೋಗಲಿ. ಆ ಬಗ್ಗೆ ನಾನು ಚಿಂತೆ ಮಾಡುತ್ತಿಲ್ಲ, ಪ್ರತಿಪಕ್ಷವಾಗಿ ನಮ್ಮದೇನಿದೆಯೋ ಆ ಕೆಲಸ ಮಾಡುವ ಬಗ್ಗೆ ಯೋಚನೆ ಮಾಡುತ್ತೇನೆ. ಬೇರೆಯವರ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಉತ್ತರಿಸಿದರು.
ಕಾಮಗಾರಿಗಳ ಅನುದಾನ ತಡೆಗೆ ಭ್ರಷ್ಟಾಚಾರ ಕಾರಣ ಎನ್ನುವ ಸ್ಪಷ್ಟನೆ ನೀಡಿದ್ದಾರೆ. ಆದರೆ ಎಲ್ಲಿಯಾದರೂ ಅಕ್ರಮ ಕಾಮಗಾರಿಯಾಗಿದ್ದರೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಿ, ಅದನ್ನು ಬಿಟ್ಟು ಎಲ್ಲಾ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದು ಎಷ್ಟರಮಟ್ಟಿಗೆ ಸರಿ. ಇದು ಸೇಡಿನ ರಾಜಕಾರಣ, ಈ ಬಗ್ಗೆ ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸುತ್ತೇನೆ. ಈ ರೀತಿ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಆರ್.ಆರ್ ನಗರದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳ ವೀಕ್ಷಣೆ ಮಾಡುತ್ತಿರುವ ಬಿಎಸ್ವೈ