ಬೆಂಗಳೂರು: ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದೆ. ಜರಗನಹಳ್ಳಿ ನಿವಾಸಿಗಳಾದ ಜಯಂತ್(13) ಮತ್ತು ಮೋಹನ್(13) ಮೃತಪಟ್ಟ ಬಾಲಕರು. ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಅನ್ನಪೂರ್ಣೇಶ್ವರಿ ಲೇಔಟ್‌ನ ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಅಕಾಡೆಮಿಯ ಈಜು ತರಬೇತುದಾರ ಮೋಯಿನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಬ್ಬರು ಬಾಲಕರು ನಗರದ ಜರಗನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಇಬ್ಬರೂ ಸಹ ಶಾಲೆಗೆ ಹೋಗಿರಲಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಈಜಲು ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳಕ್ಕೆ ಬಂದಿದ್ದರು. ಈ ವೇಳೆ ಈಜುಕೊಳಕ್ಕೆ ಇಳಿದಿರುವ ಇಬ್ಬರು ಆರಂಭದಲ್ಲಿ ಆಳ ಕಡಿಮೆ ಇರುವ ಕಡೆ ಈಜಾಡಿದ್ದಾರೆ. ಬಳಿಕ ಹೆಚ್ಚು ಆಳವಿರುವ ಕಡೆಗೆ ಈಜಿಕೊಂಡು ಹೋಗಿದ್ದಾರೆ. ಈ ವೇಳೆ ಸರಿಯಾಗಿ ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.
ಈ ವೇಳೆ ಈಜುಕೊಳದಲ್ಲಿ ಹೆಚ್ಚಿನ ಜನರು ಇರಲಿಲ್ಲ. ಈ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿದರೂ ಯಾರು ಗಮನಿಸಿಲ್ಲ. ಕೆಲಹೊತ್ತಿನ ಬಳಿಕ ಈಜುಕೊಳದಲ್ಲಿ ಬಾಲಕರ ದೇಹಗಳು ನೀರಿನ ಮೇಲ್ಭಾಗಕ್ಕೆ ಬಂದಾಗ ಸ್ಥಳದಲ್ಲಿದ್ದ ಕೆಲವರು ಎಳೆದು ಮೇಲಕ್ಕೆ ತಂದಿದ್ದಾರೆ. ಈ ವೇಳೆ ಇಬ್ಬರು ಮೃತಪಟ್ಟಿರುವುದು ಗೊತ್ತಾಗಿದೆ.
ಬಾಲಕನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಠಾಣೆ ಪೊಲೀಸರು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈಜು ತರಬೇತುದಾರ ಮೋಯಿನ್‌ನನ್ನು ಬಂಧಿಸಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿಗೆ ಚಾಕು ಇರಿದಿದ್ದ ಪತಿ ಅರೆಸ್ಟ್ (ಬೆಂಗಳೂರು): ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿಗೆ ಚಾಕುವಿನಿಂದ ಇರಿದಿದ್ದ ಪತಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗಪ್ಪ(40) ಬಂಧಿತ ಆರೋಪಿ. ಜಯಶ್ರೀ (33) ಎಂಬಾಕೆ ಚಾಕು ಇರಿತಕ್ಕೊಳಗಾದವರು. ಜಕ್ಕೂರು ಸಮೀಪದ ಮುನೇಶ್ವರ ಬೀದಿಯಲ್ಲಿ ಈ ಘಟನೆ ನಡೆದಿದೆ.
15 ವರ್ಷದ ಹಿಂದೆ ವಿವಾಹವಾಗಿದ್ದ ಕಲಬುರಗಿ ಮೂಲದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜಯಶ್ರಿ ಆಯಾ ಕೆಲಸ ಮಾಡಿಕೊಂಡಿದ್ದು, ನಾಗಪ್ಪ ಗಾರೆ ಕೆಲಸ ಮಾಡುತ್ತಿದ್ದ. ನಾಗಪ್ಪನಿಗೆ ಕುಡಿತದ ಚಟವಿದ್ದು, ಮನೆಗೆ ಸಾಮಗ್ರಿಯನ್ನು ತಂದುಕೊಂಡದೇ ವಿನಾಕಾರಣ ಪತ್ನಿ ಮೇಲೆ ಅನುಮಾನಪಟ್ಟು ಕುಡಿದು ಬಂದು ಹಲ್ಲೆ ಮಾಡುತ್ತಿದ್ದ. ಇದೇ ರೀತಿ ಜ. 28 ರ ಮಧ್ಯರಾತ್ರಿ 12.15 ರ ಸಮಯದಲ್ಲಿ ಕಂಠ ಪೂರ್ತಿ ಕುಡಿದು ಮನೆಗೆ ಬಂದು ನನಗೆ ಕುಡಿಯಲು ಹಣ ಕೊಡುವಂತೆ ಪತ್ನಿಯೊಂದಿಗೆ ಗಲಾಟೆ ಮಾಡಿದ್ದಾನೆ.
ಗಲಾಟೆ ವಿಕೋಪಕ್ಕೆ ಹೋದಾಗ ನಿನ್ನ ಸಾಯಿಸಿ ಬಿಡುತ್ತೇನೆ ಎಂದು ಹೇಳಿ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕತ್ತಿನ ಭಾಗಕ್ಕೆ ಇರಿಯಲು ಬಂದಾಗ ಆಕೆ ತಪ್ಪಿಸಿಕೊಂಡಿದ್ದು ಅದು ಬಲಭಾಗದ ಕೆನ್ನೆಗೆ ಚುಚ್ಚಿದೆ. ನಂತರ ಅದೇ ಚಾಕುವಿನಿಂದ ಎಡಭಾಗದ ಕತ್ತಿನ ಭಾಗಕ್ಕೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಜೋರಾಗಿ ಕಿರುಚಿಕೊಂಡಿದ್ದು, ಆಗ ಅಕ್ಕಪಕ್ಕದ ಮನೆಯವರು ಬಂದಿದ್ದು, ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ. ಪತ್ನಿ ಜಯಶ್ರೀ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದಾರೆ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ನಾಗಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.