ಬೆಂಗಳೂರು : ಬಿಎಂಟಿಸಿ ಬಸ್ಗೆ ಬೆಂಕಿ ತಗುಲಿ ಕಂಡಕ್ಟರ್ ಸಜೀವ ದಹನವಾದ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಡೆಕ್ಟರ್ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ಸಂಬಂಧ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ಅಗ್ನಿದುರಂತವು ಆಕಸ್ಮಿಕವೋ ಅಥವಾ ಪೂರ್ವಸಂಚಿನ ಕೃತ್ಯವೋ ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ.
ಕಳೆದ ಗುರುವಾರ ರಾತ್ರಿ ಲಿಂಗಧೀರನಹಳ್ಳಿ ಡಿ ಗ್ರೂಪ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಾಗಿತ್ತು. ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಬಸ್ ನಲ್ಲಿ ಮಲಗಿದ್ದ ಕಂಡಕ್ಟರ್ ಮುತ್ತಯ್ಯ ಅವರು ಸಜೀವ ದಹನವಾಗಿದ್ದರು. ಈ ಸಂಬಂಧ ಪೊಲೀಸರು, ಬಿಎಂಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ದುರಂತ ಹಿನ್ನೆಲೆ ತಾಂತ್ರಿಕ ಸಾಕ್ಷ್ಯಾಧಾರ ಕಲೆ ಹಾಕಿದ್ದ ಪೊಲೀಸರು ಈ ಮಾದರಿಯನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದರು. ಸದ್ಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮತ್ತೊಂದೆಡೆ ಬಿಎಂಟಿಸಿ ಬಸ್ ಚಾಲಕ ಪ್ರಕಾಶ್ ನನ್ನು ಕರೆದು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಚಾಲಕ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ದುರಂತದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿವೆ.
ಅಂದು ರಾತ್ರಿ ಸುಮಾರು 10:30ಕ್ಕೆ ನಿಲ್ಲಿಸಿದ್ದ ಬಸ್‌ನಲ್ಲಿ ಮುಂಜಾನೆ 4:40ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್ ಚಾಲ್ತಿಯಲ್ಲಿದ್ದರೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದು ಎಂದು ಹೇಳಬಹುದಿತ್ತು. ಆದರೆ, ಇಲ್ಲಿ ಆಫ್ ಆಗಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಹೇಗಾಯಿತು ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಸಂಬಂಧ ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೆತ್ತಿಕೊಂಡ ಬ್ಯಾಡರಹಳ್ಳಿ ಪೊಲೀಸರು ಡ್ರೈವರ್ ಪ್ರಕಾಶ್ ಹೇಳಿಕೆ ಜೊತೆಗೆ ಬಸ್ ನಿಲ್ದಾಣದ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ, ಮುತ್ತಯ್ಯ ಅವರು ಒಬ್ಬರೇ ಬಸ್‌ನಲ್ಲಿ ಮಲಗಿದ್ದು ಡ್ರೈವರ್ ಚಾಲಕರು ತಂಗುವ ಕೊಠಡಿಯಲ್ಲಿ ಮಲಗಿದ್ದರು. ಆದರೆ ಮುಂಜಾನೆ 3 ಗಂಟೆಗೆ ಮತ್ತು 4 ಗಂಟೆ ಹೊತ್ತಿಗೆ ಡ್ರೈವರ್ ಎದ್ದಿದ್ದರು ಎಂದು ಹೇಳಲಾಗಿದೆ. ಇಲ್ಲಿ ಬೆಂಕಿ ಅವಘಡ ನಡೆದಿರುವುದು 4:26ಕ್ಕೆ ಹೀಗಾಗಿ ಪೊಲೀಸರಿಗೆ ಘಟನೆ ಸಂಬಂಧ ಅನುಮಾನ ಮೂಡಿದೆ.
ಘಟನೆ ಸಂಬಂಧ ಬಿಎಂಟಿಸಿ ಅಧಿಕಾರಿಗಳನ್ನು ವಿಚಾರಣೆ ನಡೆಸಿರುವ ಪೊಲೀಸರಿಗೆ, ಫೆಬ್ರವರಿಯಲ್ಲಿ ಬಸ್ ಸಂಪೂರ್ಣ ಕಂಡೀಷನ್ ಪರಿಶೀಲನೆ ಮಾಡಲಾಗಿತ್ತು. ಪರಿಶೀಲನೆ ವೇಳೆ ಯಾವುದೇ ತೊಂದರೆ ಇಲ್ಲ ಎಂಬುದಾಗಿ ಹೇಳಿದ್ದರು. ಏನು ತೊಂದರೆ ಇಲ್ಲದೆ ನಿಂತಿದ್ದ ಬಸ್‌ನಲ್ಲಿ ಬೆಂಕಿ ಅವಘಡ ಆಯಿತು ಹೇಗೆ ಉಂಟಾಯಿತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸುಟ್ಟು ಹೋದ ಬಸ್ ಅವಶೇಷಗಳನ್ನು ಪರಿಶೀಲಿಸಿ ಮಾದರಿಗಳನ್ನು ಸಂಗ್ರಹಿಸಿರುವ FSL ತಂಡಕ್ಕೆ ಬೇಗ ವರದಿ ನೀಡುವಂತೆ ಮನವಿ ಮಾಡಿದ್ದಾರೆ.
ಅಗ್ನಿ ಅವಘಡದ ಬಗ್ಗೆ ಇರುವ ಅನುಮಾನಗಳು :
1) ನಿಂತಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಹೇಗೆ ಆಗುತ್ತದೆ..?
2) ಇಂಜಿನ್ ಬಿಸಿಯಾಗಿದ್ದು ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಅಂದುಕೊಂಡರೂ ಪಾರ್ಕ್ ಆದ ಆರು ಗಂಟೆ ನಂತರ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ?
3) ಕಂಡಕ್ಟರ್ ಮುತ್ತಯ್ಯ ಮಲಗಿದ್ದಲ್ಲೇ ಇದ್ದಾರೆ. ಬೆಂಕಿ ಕೆನ್ನಾಲಿಗೆಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು.
4) ಎಷ್ಟೇ ಗಾಢ ನಿದ್ದೆಯಲ್ಲಿದ್ದರೂ ಬಿಸಿಗೆ ಮನುಷ್ಯನಿಗೆ ಎಚ್ಚರಿಕೆ ಆಗುತಿತ್ತು..? ಆದರೆ ಮುತ್ತಯ್ಯ ಮಲಗಿದ್ದಲೇ ಸಜೀವ ದಹನ ಆಗಿದ್ದಾರೆ.
5) ಇನ್ನು ಡ್ರೈವರ್ ಪ್ರತ್ಯೇಕವಾಗಿ ಮಲಗಿದ್ದರೂ ಬೆಳಗ್ಗೆ 3 ಮತ್ತು 4 ಗಂಟೆಗೆ ಎದ್ದಿದ್ದು ಯಾಕೆ..?
6) ಕೇವಲ ಕಂಡಕ್ಟರ್ ಮಲಗಿದ್ದ ಜಾಗ ಅಂದರೆ ಡ್ರೈವರ್ ಸೀಟ್ ಹಾಗೂ ಇಂಜಿನ್ ಪಕ್ಕದ ಸೀಟ್ ಗೆ ಮಾತ್ರ ಬೆಂಕಿ
7) ಹೀಗಾಗಿ ಮುತ್ತಯ್ಯ ಹಿಂದಿನ ಕಾರ್ಯವೈಖರಿ, ಯಾರ ಜೊತೆ ಆದ್ರೂ ಮನಸ್ತಾಪ ಇತ್ತ ಎಂಬುದರ ಬಗ್ಗೆಯೂ ವಿಚಾರಣೆ
ಇದನ್ನೂ ಓದಿ : ಬಿಎಂಟಿಸಿ ಬಸ್‌ನಲ್ಲಿ ಬೆಂಕಿ: ನಿದ್ರಿಸುತ್ತಿದ್ದ ನಿರ್ವಾಹಕ ಸಜೀವ ದಹನ