ಬೆಂಗಳೂರು : ಕೃಷಿ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಾಪಸ್ ಸೇರಿದಂತೆ ರೈತ ಸಂಬಂಧಿ ಯೋಜನೆಗಳನ್ನು ರಾಜ್ಯ ಬಜೆಟ್‌ನಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಇಂದು ಪ್ರತಿಭಟನೆ ನಡೆಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಸಿ.ಟಿ.ರವಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಧರಣಿ ಉದ್ದೇಶಿಸಿ ಮಾತನಾಡಿದ ಸಿ.ಟಿ.ರವಿ, "ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ರೈತರ ಹಿತ ಕಾಪಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀರಾವರಿಗೂ ಹಣ ಇಲ್ಲ, ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭೂಸಿರಿ ಸೇರಿ ಅನೇಕ ಯೋಜನೆಗಳು ರದ್ದಾಗಿವೆ. ರೈತರ ಬೆನ್ನುಮೂಳೆ ಮುರಿಯಲು ರಾಜ್ಯ ಸರ್ಕಾರ ಮುಂದಾಗಿದೆ" ಎಂದರು.
"ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಕ್ಕೆ ಬಂದ ಕೇವಲ 80 ದಿನಗಳಲ್ಲಿ ರಾಜ್ಯದ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಪೂರಿತ ನೀರು ಸೇವಿಸಿ ಹಲವರು ಮೃತಪಟ್ಟಿದ್ದಾರೆ" ಎಂದು ದೂರಿದರು. ಇದೇ ವೇಳೆ, "ಬಿಜೆಪಿಯ ಜನಪರ ಯೋಜನೆಗಳನ್ನು ಪುನರ್‌ಸ್ಥಾಪಿಸಬೇಕು. ಕೇಂದ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಜಾರಿಗೊಳಿಸಿದೆ. ನೀವೂ ಕೂಡ ಬೆಂಬಲ ಬೆಲೆ ಯೋಜನೆ ಜಾರಿ ಮಾಡಿ" ಎಂದು ಒತ್ತಾಯಿಸಿದರು.
"ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ಸರ್ಕಾರ ಕೊಡುತ್ತಿದ್ದ 4 ಸಾವಿರ ರೂಪಾಯಿಯನ್ನು ಮುಂದುವರಿಸಿ. 6 ಸಾವಿರ ರೂ ಕೊಟ್ಟು ನಿಮ್ಮ ಸಾಮರ್ಥ್ಯ ತೋರಿಸಿ" ಎಂದು ಅವರು ಸವಾಲೆಸೆದರು. ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ. ಕಂಟ್ರಾಕ್ಟರ್ಗಳು ನಿಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ" ಎಂದು ಟೀಕಿಸಿದರು. ನಮ್ಮ ರೈತರಿಗೆ ನೀರು ಕೊಟ್ಟು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಕೊಡಿ ಎಂದು ಇದೇ ವೇಳೆ ಅವರು ಸಲಹೆ ನೀಡಿದರು.
ನಂತರ ಮಾತನಾಡಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ನಾರಾಯಣ್, "ಅನ್ನದಾತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಇದು ಬಜೆಟ್‍ನಲ್ಲೂ ಪ್ರತಿಫಲಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೈತವಿರೋಧಿ ನೀತಿಗಳೇ ಜಾರಿಗೊಳ್ಳುತ್ತವೆ. ರೈತರ ವಿರುದ್ಧ ನಿಲುವು ಅವರದ್ದು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರವನ್ನು ಕೇಂದ್ರ, 4 ಸಾವಿರವನ್ನು ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿತ್ತು. ರಾಜ್ಯ ನೀಡುವ ಮೊತ್ತವನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳು ಸ್ಥಗಿತವಾಗಿವೆ. ಅವುಗಳನ್ನು ಮತ್ತೆ ಜಾರಿ ಮಾಡಿ" ಎಂದು ಆಗ್ರಹಿಸಿದರು.
ಸಿ.ಟಿ.ರವಿ ಸೇರಿದಂತೆ ರೈತ ಮೋರ್ಚಾ ಮುಖಂಡರು ಮತ್ತು ಪಕ್ಷದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಇದನ್ನೂ ಓದಿ: ಬಾಕಿ ಬಿಲ್ಗೆ ಕಮಿಷನ್ ಆರೋಪ: ಕಾಂಗ್ರೆಸ್ ಹೈ ಕಮಾಂಡ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಪಾಲಿಕೆ ಗುತ್ತಿಗೆದಾರರು