ಬೆಂಗಳೂರು: ಬಹುಮತ ಕಳೆದುಕೊಂಡಿರುವ ಮೈತ್ರಿ ಸರ್ಕಾರದ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸುವ ಮಹತ್ವದ ನಿರ್ಧಾರವನ್ನು ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಯಿತು. ಒಟ್ಟಾರೆ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಅವಲೋಕಿಸಲಾಯಿತು. ರಾಜ್ಯದಲ್ಲಿ ಸರ್ಕಾರ ರಚನೆಯಾದಾಗಿನಿಂದ ಒಂದಲ್ಲಾ ಒಂದು ಬಂಧನದಲ್ಲಿ ಸಿಲುಕಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬರ ಸಮಸ್ಯೆಗೆ ನೆರವು ನೀಡಿಲ್ಲ, ಪರಸ್ಪರ ಕಚ್ಚಾಟ ಮಾಡಿದ್ದಾರೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂತು ಎಂದರು.
ನಾವು ಸರ್ಕಾರ ಕೆಡವಲು ಯಾವುದೇ ಪ್ರಯತ್ನ ಮಾಡಿಲ್ಲ. ಶಾಸಕರಿಗೆ ಆಮಿಷ ತೋರಿಸುವ ಕೆಲಸ ಮಾಡಲ್ಲ. ಇನ್ನೂ ಎರಡು ಮೂರು ದಿನ ಕಾದು ನೋಡುತ್ತೇವೆ. ರಾಜಕೀಯ ಪರಿಸ್ಥಿತಿ ಸುಧಾರಿಸದೇ ಇದ್ದರೆ ಸರ್ಕಾರ ಪತನಗೊಳ್ಳುವ ವಾತಾವರಣ ನಿರ್ಮಾಣ ಮುಂದುವರೆದರೆ ಬಿಜೆಪಿ ಏನು ಮಾಡಬೇಕು ಎಂದು ಪರಿಸ್ಥಿತಿ ಅವಲೋಕಿಸಿ ನಾಳೆ ಸಂಜೆ 5 ಗಂಟೆಗೆ ಮತ್ತೆ ಶಾಸಕಾಂಗ ಸಭೆ ನಡೆಸಿ ನಿರ್ಧರಿಸಲಾಗುತ್ತದೆ ಎಂದರು.
ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದು ನಾವು 107 ಕ್ಕೆ ತಲುಪಿದ್ದೇವೆ. 13 ಶಾಸಕರ ರಾಜೀನಾಮೆ ಮತ್ತು ಇಬ್ಬರು ಪಕ್ಷೇತರರು ಬಿಜೆಪಿ ಕಡೆ ಬಂದ ಕಾರಣ ಅವರ ಬಲ 104ಕ್ಕೆ ತಲುಪಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ರಾಜ್ಯಪಾಲರಿಗೆ ಶಂಕರ್ ಮತ್ತು ನಾಗೇಶ್ ರಾಜೀನಾಮೆ ಪತ್ರ ಹಾಗೂ ಬಿಜೆಪಿಗೆ ಬೆಂಬಲ ಪತ್ರ ನೀಡಿದ್ದಾರೆ. ಆರು ತಿಂಗಳ ಒಳಗಾಗಿ ಸಹ ಸದಸ್ಯತ್ವ ಪಡೆಯಬೇಕು. ಹಾಗಾಗಿ ಅವರ ಬೆಂಬಲ ಕಾನೂನು ಸಮಸ್ಯೆಯ ಗಣನೆಗೆ ಬರಲ್ಲ ಎಂದು ಸ್ಪಷ್ಟಪಡಿಸಿದರು.