ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಂಡು ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿರುವ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಆಪರೇಷನ್ ಹಸ್ತದ ಚರ್ಚೆ ನಡುವೆ ಸೋಮಶೇಖರ್ ಅವರ ಈ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.
ಮಾಜಿ ಸಚಿವ ಹಾಗೂ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಮಾರಪಾರ್ಕ್ ಈಸ್ಟ್ನಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಸೋಮಶೇಖರ್ ತಮ್ಮ ಕ್ಷೇತ್ರದ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಕಾಮಗಾರಿಗಳು, ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದರು. 'ಇದು ರಾಜಕೀಯ ಕಾರಣದ ಭೇಟಿಯಲ್ಲ, ಕೇವಲ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸೀಮಿತವಾದ ಭೇಟಿ ಎಂದು ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಹೊಗಳಿದ್ದ ಸೋಮಶೇಖರ್ : ಇತ್ತೀಚೆಗಷ್ಟೇ ಯಶವಂತಪುರ ಕ್ಷೇತ್ರದಲ್ಲಿ ನಡೆದಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಎಸ್‌ಟಿ ಸೋಮಶೇಖರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದರು. ಡಿಕೆಶಿ ತಮ್ಮ ರಾಜಕೀಯ ಗುರು ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇದು ಬಿಜೆಪಿಯಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿತ್ತು.
ಈ ನಡುವೆ ಸೋಮಶೇಖರ್ ಕಾಂಗ್ರೆಸ್ ಸೇರಲಿದ್ದಾರೆ, ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿದ್ದಾರೆ. ಪುತ್ರನನ್ನು ಯಶವಂತಪುರ ಕ್ಷೇತ್ರದ ಉಪ ಚುನಾವಣೆಗೆ ನಿಲ್ಲಿಸುತ್ತಾರೆ ಎನ್ನುವ ಚರ್ಚೆ ಆರಂಭವಾಗಿತ್ತು. ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಖುದ್ದು ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಬೆಂಗಳೂರು ಶಾಸಕರ ಸಭೆ ನಡೆಸಿ ಸಮಸ್ಯೆಗೆ ಪರಿಹಾರಕ್ಕೆ ಸೂಚಿಸಿದ್ದರು. ಅದರಂತೆ ಸೋಮಶೇಖರ್ ವಿರುದ್ಧ ಕೆಲಸ ಮಾಡಿದ್ದ ಮಾರೇಗೌಡರನ್ನು ಇಂದು ಬೆಳಗ್ಗೆಯಷ್ಟೇ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಅದರ ನಡುವೆ ಸೋಮಶೇಖರ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಬಿಜೆಪಿಯಲ್ಲಿ ಮತ್ತೆ ಸಂಚಲನ ಮೂಡಿಸಿದೆ.
ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲೇ ಇದ್ದೇನೆ : ಪಕ್ಷ ಬಿಡುವ ವದಂತಿ ಬೆನ್ನಲ್ಲೇ ಶನಿವಾರದಂದು ಶಾಸಕ ಎಸ್.ಟಿ ಸೋಮಶೇಖರ್ ಅವರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ಕಚೇರಿಯಲ್ಲಿ ಮಾಜಿ ಸಚಿವ ಸಿ.ಟಿ ರವಿ ಜೊತೆ ಕೆಲಕಾಲ ಮಾತುಕತೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿದ್ದ ಸಭೆ ಬಗ್ಗೆ ತಡವಾಗಿ ಮಾಹಿತಿ ಸಿಕ್ಕಿತ್ತು. ನಾನು ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ ಇದ್ದ ಕಾರಣದಿಂದ ಸಭೆಯಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ನಾನು ಮಾನಸಿಕವಾಗಿ, ದೈಹಿಕವಾಗಿ ಬಿಜೆಪಿಯಲ್ಲೇ ಇದ್ದೇನೆ" ಎಂದು ಸ್ವಷ್ಟನೆ ನೀಡಿದ್ದರು.
ಇದನ್ನೂ ಓದಿ : ಶಾಸಕ ಎಸ್‌ಟಿ ಸೋಮಶೇಖರ್ ಮುನಿಸು: ಯಶವಂತಪುರ ಮಂಡಲ ಮಾಜಿ ಅಧ್ಯಕ್ಷ ಮಾರೇಗೌಡರನ್ನು ಉಚ್ಛಾಟಿಸಿದ ಬಿಜೆಪಿ