ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಸಲು ಇಬ್ಬರು ವೀಕ್ಷಕರನ್ನು ಬಿಜೆಪಿ ಸಂಸದೀಯ ಮಂಡಳಿ ನಿಯೋಜನೆ ಮಾಡಿದೆ. ಇಬ್ಬರು ವೀಕ್ಷಕರಿಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಜವಾಬ್ದಾರಿ ನೀಡಲಾಗಿದೆ.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಜಿ ಕಿಶನ್ ರೆಡ್ಡಿ ಅವರನ್ನು ಕರ್ನಾಟಕ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆಯ್ಕೆಯ ಚುನಾವಣಾ ಪ್ರಕ್ರಿಯೆಗೆ ವೀಕ್ಷಕರನ್ನಾಗಿ ನೇಮಕ ಮಾಡಿ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಹೀಗಾಗಿ ಇಂದು ರಾಜ್ಯ ಬಿಜೆಪಿಯಲ್ಲಿ ಇಂದು ದೊಡ್ಡ ಮಟ್ಟದಲ್ಲಿ ರಾಜಕೀಯ ಚಟುವಟಿಕೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿಕೆ ಅರುಣಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಂಜೆ ವೇಳೆಗೆ ವೀಕ್ಷಕರು ಬಂದು ತಲುಪಲಿದ್ದಾರೆ. ಕಿಶನ್‌ರೆಡ್ಡಿ, ಧಮೇಂದ್ರ ಪ್ರಧಾನ್ ಆಗಮಿಸುವುದು ಖಚಿತವಾಗಿದೆ.
ಇದಕ್ಕೆ ಪೂರಕವಾಗಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಸಹ ಉಸ್ತುವಾರಿ ಡಿಕೆ ಅರುಣಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅಧಿಕೃತ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಬರುತ್ತಿದ್ದು, ಅವರಿಗೆ ಕೊಠಡಿಗಳನ್ನು ಕಾಯ್ದಿರಿಸುವಂತೆ ಪಕ್ಷದ ರಾಜ್ಯ ಕಾರ್ಯಾಲಯದಿಂದ ಕುಮಾರಕೃಪಾ ಅತಿಥಿ ಗೃಹಕ್ಕೆ ಪತ್ರದ ಮೂಲಕ ಸೂಚನೆ ನೀಡಲಾಗಿದೆ.
ಇನ್ನು ಹೈಕಮಾಂಡ್ ನಾಯಕರ ಆಗಮನದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್ ಕುಮಾರಕೃಪಾ ಅತಿಥಿ ಗೃಹಕ್ಕೆ ಭೇಟಿ ನೀಡಿದರು. ವಾಸ್ತವ್ಯ ವ್ಯವಸ್ಥೆ, ಸಣ್ಣ ಮಟ್ಟದ ಸಭೆಗೆ ವ್ಯವಸ್ಥೆ ಕಲ್ಪಿಸುವ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದರು. ಇಂದು ಸಂಜೆ 7:30 ಕ್ಕೆ ಕೇಂದ್ರ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ.
ಇದನ್ನೂ ಓದಿ: ‘ಮುಂದಿನ ಸಿಎಂ ಸಿದ್ದರಾಮಯ್ಯ’.. ಬೆಳಗಾವಿಯಲ್ಲೂ ವಿಪಕ್ಷ ನಾಯಕನ ಪರ ಘೋಷಣೆ
ಈಗಾಗಲೇ ಶಾಸಕರಿಗೆ ಕರೆ ಮಾಡಲಾಗಿದೆ. ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ನಡೆಯಲಿದ್ದು, ಇಂದು ಸಂಜೆಯೇ ಮುಖ್ಯಮಂತ್ರಿ ಆಯ್ಕೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಹೆಸರು ಘೋಷಣೆ ಮಾಡಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.