ಬೆಂಗಳೂರು : ಬಿಜೆಪಿ ಸರ್ಕಾರದ ವೇಳೆ ಹೊಸ ನಾಯಕನ ಆಯ್ಕೆಗೆ ವೇದಿಕೆಯಾಗುತ್ತಿದ್ದ ಕ್ಯಾಪಿಟಲ್ ಹೋಟೆಲ್ ಈಗ ಮತ್ತೊಮ್ಮೆ ಅಂತಹ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರ ಆಯ್ಕೆಗೆ ನಿದರ್ಶನವಾಗಿದ್ದ ಹೋಟೆಲ್‌ನಲ್ಲಿ ಈ ಬಾರಿಗೆ ಯಾರ ಆಯ್ಕೆಯಾಗಲಿದೆ ಎನ್ನುವ ಕುತೂಹಲ ಮೂಡಿದೆ.
2011ರ ಜುಲೈನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದ ವೇಳೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಇದೇ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದಿತ್ತು. ಯಡಿಯೂರಪ್ಪ ಅಭ್ಯರ್ಥಿಯಾಗಿ ಸದಾನಂದಗೌಡ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಪೈಪೋಟಿಯಲ್ಲಿದ್ದರು. ಅಂದು ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಾಗಿತ್ತು. ಸದಾನಂದ ಗೌಡ ಹೆಚ್ಚಿನ ಶಾಸಕರ ಬೆಂಬಲದೊಂದಿಗೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು.
ನಂತರ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಸದಾನಂದ ಗೌಡರನ್ನು ಕುರ್ಚಿಯಿಂದ ಇಳಿಸಿದ್ದ ಯಡಿಯೂರಪ್ಪ, 2011ರಲ್ಲಿ ಸಿಎಂ ಸ್ಥಾನ ತಪ್ಪಿಸಿದ್ದ ಜಗದೀಶ್ ಶೆಟ್ಟರ್ ಅವರನ್ನೇ, 2012ರಲ್ಲಿ ಸದಾನಂದಗೌಡರ ನಂತರ ಸಿಎಂ ಹುದ್ದೆಗೆ ಆಯ್ಕೆ ಮಾಡಿದರು. ಆಗಲೂ ಇದೇ ಕ್ಯಾಪಿಟಲ್ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಶೆಟ್ಟರ್ ಅವರನ್ನ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ಈಗ ಮತ್ತೆ 2008ರ ಆಳ್ವಿಕೆಯಂತಹ ಕಾಲ ಮರುಕಳಿಸುತ್ತಿದೆ. ಐದು ವರ್ಷದಲ್ಲಿ ಮೂರೂವರೆ ವರ್ಷಕ್ಕೆ ಆಗ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಈಗ ಎರಡು ವರ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಬಹುತೇಕ ಹಿಂದೆ ಇದ್ದ ಸನ್ನಿವೇಶವೇ ಈಗ ನಿರ್ಮಾಣವಾಗಿದೆ. ಮತ್ತೆ ಅದೇ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ.
ಆದರೆ, ಹಿಂದೆ ಇಬ್ಬರು ಸಿಎಂ ಆಯ್ಕೆಯಲ್ಲಿ ಯಡಿಯೂರಪ್ಪ ನಿರ್ಧಾರವೇ ಅಂತಿಮವಾಗಿತ್ತು. ಯಡಿಯೂರಪ್ಪ ಸೂಚಿಸಿದ್ದ ವ್ಯಕ್ತಿಗೆ ಬೆಂಬಲಿಗರು ಬಹುಪರಾಕ್ ಹಾಕಿದ್ದರು. ಆದರೆ, ಈ ಬಾರಿ ಯಡಿಯೂರಪ್ಪ ಆ ನಿರ್ಧಾರದಿಂದ ವಿಮುಖರಾಗಿದ್ದಾರೆ. ಮುಂದಿನ ಸಿಎಂ ಆಯ್ಕೆಗೆ ಯಾರ ಹೆಸರನ್ನೂ ಸೂಚಿಸದೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಹಾಗಾಗಿ, ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೋ ಅವರ ಅವಿರೋಧ ಆಯ್ಕೆ ಪಕ್ಕಾ ಆಗಿದೆ.