ಬೆಂಗಳೂರು: "ಜ.22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ಪಕ್ಷ ತೆಗೆದುಕೊಂಡಿರುವ ತೀರ್ಮಾನ ಬಿಜೆಪಿಗೆ ಅಶ್ಚರ್ಯಕರ ಸಂಗತಿ ಅಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ನಗರದ ಹೊರವಲಯದಲ್ಲಿರುವ ರಮಾಡ ರೆಸಾರ್ಟ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿರೀಕ್ಷೆಯಂತೆ ಕಾಂಗ್ರೆಸ್ ನಿರ್ಧಾರ ಕೈಗೊಂಡಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗಿದೆ" ಎಂದು ಟೀಕಿಸಿದರು.
"ಇದು ರಾಮಭಕ್ತರಿಗೂ ಅನಿರೀಕ್ಷಿತವಲ್ಲ, ಕಾಂಗ್ರೆಸ್ ನಿರ್ಧಾರ ನಿರೀಕ್ಷಿತವೇ. ರಾಮನ ಅಸ್ತಿತ್ವ ಪ್ರಶ್ನಿಸಿದ್ದವರು ಕಾಂಗ್ರೆಸ್ಸಿಗರು, ಬಾಬರಿ ಮಸೀದಿ ಧ್ವಂಸ ವೇಳೆ ದೇಶದಲ್ಲಿ ಅಧಿಕಾರದಲ್ಲಿದ್ದ ಐದು ರಾಜ್ಯಗಳ ಬಿಜೆಪಿ ಸರ್ಕಾರವನ್ನು ವಜಾ ಮಾಡಿದ್ದ ಕಾಂಗ್ರೆಸ್ಸಿಗರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?. ಪದೇ ಪದೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ರಾಮಭಕ್ತರಿಗೆ ತೊಂದರೆ ಕೊಡುತ್ತಿದ್ದ ಕಾಂಗ್ರೆಸ್ಸಿಗರ ಈ ನಿರ್ಣಯ ಯಾರಿಗೂ ಆಶ್ಚರ್ಯ ತಂದಿಲ್ಲ. ಅದರ ಬದಲಾಗಿ ಕಾಂಗ್ರೆಸ್ನ ನಿಜ ಬಣ್ಣ ತೆರೆದಿಟ್ಟಿದ್ದಾರೆ" ಎಂದು ಕಿಡಿಕಾರಿದರು.
"ಸದ್ಯ 22 ರಂದು ರಾಜ್ಯದ ಎಲ್ಲ ಮುಜರಾಯಿ ಅಧೀನದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮುಜಿರಾಯಿ ಇಲಾಖೆ ಆದೇಶ ಹೊರಡಿಸಿದ್ದು, ನಾಳೆ ನಾಡಿದ್ದು ರಾಜ್ಯ ಸರ್ಕಾರದ ಈ ಸುತ್ತೋಲೆಯನ್ನೂ ವಾಪಸ್ ಪಡೆಯುವ ಸಾಧ್ಯತೆ ಇದೆ. ಇವರಿಗೆ ರಾಮನ ಬಗ್ಗೆ ಭಕ್ತಿ ಶ್ರದ್ಧೆ ಇಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರಿಗೆ ಬುದ್ದಿ ಬಂದಿಲ್ಲ, ಬುದ್ದಿ ಬರುವುದೂ ಇಲ್ಲ, ಅವರಿಗೆ ಶ್ರೀರಾಮ ಬುದ್ದಿ ಕೊಡಲಿ" ಎಂದು ಲೇವಡಿ ಮಾಡಿದರು.
ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, "ಕಾಂಗ್ರೆಸ್ ನಾಯಕರು ಅಯೋಧ್ಯೆಗೆ ಹೋಗಲ್ಲ ಎನ್ನುವ ತೀರ್ಮಾನ ತೆಗೆದುಕೊಂಡಿದ್ದಾರೆ. ಅಯೋಧ್ಯೆಗೆ ಹೋಗಲ್ಲ ಅಂತ ಅಂದಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರೂ ಕೂಡ ಅಯೋಧ್ಯೆ ರಾಮನ ದರ್ಶನ ಮಾಡೋದಾಗಿ ಹೇಳ್ತಿದ್ದಾರೆ. ಆದರೆ, ಕಾಂಗ್ರೆಸ್ ಮಾತ್ರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ. ರಾಮ ಹುಟ್ಟಿರೋದಕ್ಕೆ ಬರ್ತ್ ಸರ್ಟಿಫಿಕೇಟ್ ಇದೆಯಾ ಅಂತ ಕೇಳಿದ್ದರು. ರಾಮ ಕಾಲ್ಪನಿಕ, ವಾಲ್ಮೀಕಿ ರಾಮಾಯಣ ಅಂತ ಹೇಳಿದ್ದರು" ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಸಿಟಿ ರವಿ ಮಾತನಾಡಿ, "ಕಾಂಗ್ರೆಸಿಗರು ಬರೋದು ಬೇಡ ಎಂದು ರಾಮನಿಗೂ ಅನಿಸಿರಬಹುದು. ಕಾಂಗ್ರೆಸ್ಗೂ ಅನಿಸಿರಬಹುದು ನಾವು ಯಾವ ಮುಖ ಇಟ್ಕೊಂಡು ಹೋಗುವುದು" ಎಂದು ಟೀಕಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಮಾತನಾಡಿ , "22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಕಾಂಗ್ರೆಸ್ ಮತ್ತೆ ಧಕ್ಕೆ ಮಾಡಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ನಟ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ