ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಣಮುಖರಾಗಿದ್ದು, ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜು.19ರಂದು ವಿಧಾನಸಭೆಯಲ್ಲಿ ಅಸಭ್ಯ ವರ್ತನೆಗಾಗಿ ಬಿಜೆಪಿಯ 10 ಶಾಸಕರನ್ನು ಸ್ಪೀಕರ್ ಯುಟಿ ಖಾದರ್ ಅಮಾನತು ಗೊಳಿಸಿದ್ದರು. ಈ ವೇಳೆ ಸ್ಪೀಕರ್ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಅಮಾನತುಗೊಂಡ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕಲು ಮಾರ್ಷಲ್‌ಗಳು ಪ್ರಯತ್ನಿಸಿದ್ದರು. ಅಮಾನತುಗೊಂಡ ಶಾಸಕರ ಇತರೆ ಬಿಜೆಪಿ ಶಾಸಕರು ರಕ್ಷಣೆ ನೀಡುತ್ತಿದ್ದರು. ಈ ವೇಳೆ ಸದನದಲ್ಲಿ ಗಾಲಾಟೆ ಉಂಟಾಗಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಪಿ ಮತ್ತು ಮಧುಮೇಹ ವ್ಯತ್ಯಾಸದಿಂದಾಗಿ ಕುಸಿದುಬಿದ್ದಿದ್ದರು. ಕೂಡಲೇ ಆಂಬುಲೆನ್ಸ್ ಮೂಲಕ ಶಾಸಕರನ್ನು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಾ.ಅಬ್ದುಲ್ ಖಾದಿರ್ ಅವರು ಯತ್ನಾಳ್ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದು, ಬಿಪಿ, ಶುಗರ್ ಏರುಪೇರಾದ ಹಿನ್ನೆಲೆಯಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಇದನ್ನು ಹೊರತುಪಡಿಸಿದರೆ ಆರೋಗ್ಯ ಸರಿ ಇದೆ. ಒಂದು ದಿನ ನಿಗಾದಲ್ಲಿರಿಸಿ ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಗುರುವಾರ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗಿತ್ತು.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಶಾಸಕ ಯತ್ನಾಳ್, "ನಾನು ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ಇನ್ನೆರಡು ದಿನಗಳಲ್ಲಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ತಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು" ಎಂದಿದ್ದಾರೆ.
ಆಸ್ಪತ್ರೆಯಲ್ಲಿ ನಾಯಕರ ಭೇಟಿ: ಯತ್ನಾಳ್ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ್ದರು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಇದೇ ಕಲಾಪದಲ್ಲಿ ಶಾಸಕರ ಅಮಾನತು ಆದೇಶವನ್ನು ಖಂಡಿಸಿ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಪೀಕರ್ ಚೇಂಬರ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮಾರ್ಷಲ್‌ಗಳು ಮಧ್ಯಪ್ರವೇಶಿಸಿದ್ದರು. ಈ ವೇಳೆ, ವಿಧಾನಸಭೆ ಪ್ರವೇಶ ದ್ವಾರದ ಬಳಿ ಮಾರ್ಷಲ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ನೂಕು ನುಗ್ಗಲು ವೇಳೆ ವಿಧಾನಸಭೆ ಪ್ರವೇಶ ದ್ವಾರದ ಗ್ಲಾಸ್ ಬಾಗಿಲು ಪುಡಿ ಪುಡಿಯಾಗಿತ್ತು.
ಇದನ್ನೂ ಓದಿ: ವಿಧಾನಸೌಧದಲ್ಲಿ ಶಾಸಕ ಯತ್ನಾಳ್ ಅಸ್ವಸ್ಥ: ಆಸ್ಪತ್ರೆಗೆ ದೌಡಾಯಿಸಿದ ಬಿಎಸ್ವೈ, ಸಿಎಂ, ಸ್ಪೀಕರ್