ಬೆಂಗಳೂರು: 2024ರ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಮಾತುಕತೆ ನಿರ್ಣಾಯಕ ಹಂತ ತಲುಪಿದೆ. ಉಭಯ ಪಕ್ಷಗಳ ನಡುವಿನ ದೋಸ್ತಿಯಿಂದ ಬಿಜೆಪಿಯಲ್ಲಿನ ಹಾಲಿ ಸಂಸದರು ಮತ್ತು ನಾಯಕರಿಗೆ ಈಗಿನಿಂದಲೇ ತಳಮಳ ಶುರುವಾಗಿದೆ. ಹಲವಾರು ಜೆಡಿಎಸ್ ವಿರೋಧಿ ಮುಖಂಡರಿಗೆ ಇರಿಸುಮುರಿಸು ಪರಿಸ್ಥಿತಿ ಅನುಭವಿಸುವಂತಾಗಿದೆ.
ಮೈತ್ರಿ ಮಾತುಕತೆಯಿಂದ ತಮಗೆ ಬಿಜೆಪಿಯ ಟಿಕೆಟ್ ಕೈ ತಪ್ಪಬಹುದೆನ್ನುವ ಭೀತಿ ಹಳೆ ಮೈಸೂರು ಬಾಗದ ಹಾಲಿ ಸಂಸದರು ಹಾಗೂ ಲೋಕಸಭೆ ಚುನಾವಣೆಯ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿತರಲ್ಲಿದೆ. ಮಂಡ್ಯದಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿತರಾಗಿರುವ ಸಂಸದೆ ಸುಮಲತಾ ಅಂಬರೀಶ್, ತುಮಕೂರಿನಲ್ಲಿ ಈ ಬಾರಿ ಬಿಜೆಪಿಯ ಟಿಕೆಟ್ ನಿರೀಕ್ಷೆಯಲ್ಲಿರುವ ಮಾಜಿ ಸಂಸದ ಮುದ್ದು ಹನುಮೇಗೌಡ, ಹಾಸನದಲ್ಲಿ ಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿರುವ ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ, ಪ್ರೀತಂ ಗೌಡ, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್, ಕೋಲಾರದಲ್ಲಿ ಹಾಲಿ ಸಂಸದ ಮುನಿಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಟಿಕೆಟ್ ಅಪೇಕ್ಷಿಸುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಮುಖಂಡರಲ್ಲಿ ದುಗುಡ ಆರಂಭವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಲೋಕಸಭಾ ಚುನಾವಣಾಪೂರ್ವ ಮೈತ್ರಿ ಏರ್ಪಟ್ಟರೆ ಸಂಸತ್ ಚುನಾವಣೆ ಮೇಲೆ ಟಿಕೆಟ್ ಪಡೆಯುವ ಆಕಾಂಕ್ಷಿತರಲ್ಲದೆ ಉಳಿದ ನಾಯಕರಲ್ಲೂ ಸಹ ಆತಂಕವಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಚಿವರಾದ ಹಾಲಿ ಶಾಸಕ ಎಸ್.ಟಿ.ಸೋಮಶೇಖರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಅಶ್ವಥ್ ನಾರಾಯಣ ಸೇರಿದಂತೆ ಕೆಲ ಮುಖಂಡರು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಮುಜುಗರ ಅನುಭವಿಸುವಂತಾಗಿದೆ. ಇವರೆಲ್ಲ ಜೆಡಿಎಸ್ ವಿರುದ್ಧ ಹರಿಹಾಯುತ್ತಿದ್ದರು. ದಿಢೀರ್ ಜಾತ್ಯಾತೀತ ಜನತಾದಳ ಜೊತೆಗೆ ಮೈತ್ರಿ ಸಂಬಂಧ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ತಮ್ಮ ಮುಂದಿನ ರಾಜಕೀಯದ ಹೆಜ್ಜೆ ಬಗ್ಗೆ ಜೆಡಿಎಸ್ ವಿರೋಧಿ ಮುಖಂಡರು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಇದೆ.
ಕಾಂಗ್ರೆಸ್ ಪಕ್ಷದ ಜೊತೆಗೆ ಹೆಜ್ಜೆ ಇಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿರುವ ಬೆಂಗಳೂರಿನ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಅವರಿಗೆ ಬಿಸಿ ತುಪ್ಪವಾಗಲಿದೆ. ಯಶವಂತಪುರ ಕ್ಷೇತ್ರದಲ್ಲಿ ಶಾಸಕ ಸೋಮಶೇಖರ್ ಜೆಡಿಎಸ್ ಅಭ್ಯರ್ಥಿಯ ವಿರುದ್ಧವೇ ಗೆದ್ದು ಬರುತ್ತಿದ್ದಾರೆ. ಈಗ ಒಮ್ಮಿಂದೊಮ್ಮೆಲೆ ಜಾತ್ಯಾತೀತ ಜನತಾದಳ ಜೊತೆ ಮೈತ್ರಿ ಮಾಡಿಕೊಂಡರೆ ತಮ್ಮ ಮುಂದಿನ ರಾಜಕೀಯ ನಡೆಯೇನು ಎಂಬುದು ಅವರನ್ನು ಕಾಡತೊಡಗಿದೆ ಎಂದು ತಿಳಿದುಬಂದಿದೆ.
ಟಿಕೆಟ್ ಆಕಾಂಕ್ಷಿತರಿಗೆ ತಳಮಳ: ಆಪರೇಷನ್ ಕಮಲದಲ್ಲಿ ಜಾತ್ಯಾತೀತ ಜನತಾದಳವನ್ನು ತೊರೆದು ಬಿಜೆಪಿಯನ್ನು ಸೇರಿ ಸರ್ಕಾರ ರಚಿಸಲು ಸಹಕಾರಿಯಾಗಿದ್ದ ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಮಂಡ್ಯ ಜಿಲ್ಲೆಯಲ್ಲಿ ನಾರಾಯಣಗೌಡ ಹಾಗೂ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೂ ಸಹ ಬಿಜೆಪಿಯು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವುದು ನುಂಗಲಾರದ ತುತ್ತಾಗಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ, ನಿಖಿಲ್ ಕುಮಾರಸ್ವಾಮಿ ವಿರುದ್ಧವೇ ಚುನಾವಣೆಗೆ ನಿಂತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆದ್ದು ದೇಶದ ಗಮನವನ್ನೇ ಸೆಳೆದಿದ್ದ ಹಿರಿಯ ನಟಿ ಸುಮಲತಾ ಅಂಬರೀಶ್ ಅವರಿಗೂ ಸಹ ಜೆಡಿಎಸ್ ಜೊತೆಗಿನ ಮೈತ್ರಿಯ ಮಾತುಕತೆ ಕಸಿವಿಸಿ ಉಂಟುಮಾಡಿದೆ.
ಬಿಜೆಪಿಯಿಂದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿರುವ ಸುಮಲತಾ ಅವರಿಗೆ ಬಿಜೆಪಿಯು ಒಂದು ವೇಳೆ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಒಪ್ಪಿದರೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರವನ್ನು ಕಳೆದುಕೊಳ್ಳಬೇಕಾದ ಆತಂಕವನ್ನು ಎದುರಿಸುತ್ತಿದ್ದಾರೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡುವ ಪರಿಸ್ಥಿತಿ ಎದುರಾದರೆ ಸುಮಲತಾ ಅಂಬರೀಶ್ ಅವರನ್ನ ಮಂಡ್ಯದ ಬದಲು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಆಲೋಚನೆಯನ್ನು ಬಿಜೆಪಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಸುಮಲತಾ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಬಿಜೆಪಿಯ ಹಾಲಿ ಸಂಸದರಾದ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: 'ಲೋಕ' ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ... 'ದಳ'ಕ್ಕೆ ಸಿಗಲಿರುವ 4 ಕ್ಷೇತ್ರಗಳು ಯಾವುವು?
ಇದೇ ತರಹ ದಕ್ಷಿಣ ಕರ್ನಾಟಕದಲ್ಲಿ ಹಲವು ಬಿಜೆಪಿಯ ಲೋಕಸಭೆ ಟಿಕೆಟ್ ಆಕಾಂಕ್ಷಿತರು ಮತ್ತು ಮುಖಂಡರಿಗೆ ಜೆಡಿಎಸ್ ಜೊತೆಗೆ ಬಿಜೆಪಿಯ ದೋಸ್ತಿ ಪ್ರಸ್ತಾಪ ರಾಜಕೀಯವಾಗಿ ತಳಮಳವನ್ನು ಸೃಷ್ಟಿಸಿದೆ. ಬಿಜೆಪಿ-ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಮೈತ್ರಿ ಏರ್ಪಟ್ಟರೆ ಕಾಂಗ್ರೆಸ್ ವಿರುದ್ಧ ತಮ್ಮ ಗೆಲುವು ಸುಲಭವಾಗಿದೆ ಎನ್ನುವುದು ಪ್ರತಾಪ್ ಸಿಂಹ ಅವರ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿಯೂ ಸಹ ಅಪರೋಕ್ಷವಾಗಿ ಜೆಡಿಎಸ್ ಬೆಂಬಲದಿಂದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಗೆದ್ದು ಬರುತ್ತಿದ್ದಾರೆನ್ನಲಾಗುತ್ತಿದ್ದು, ಮೈತ್ರಿಯಿಂದ ನೇರವಾಗಿ ಪ್ರತಾಪ್ ಸಿಂಹಗೆ ಜೆಡಿಎಸ್ ಮತಗಳು ದೊರೆತು ಅವರ ಗೆಲುವಿನ ಹಾದಿ ಸುಗಮವಾಗಲಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೋಸ್ತಿ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ರಾಜ್ಯದಲ್ಲಿ ಕೆಟ್ಟ ಆಡಳಿತ ನೀಡುತ್ತಿರುವ ಕಾಂಗ್ರೆಸ್ ವಿರುದ್ಧ ಹೋರಾಡಲು ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಅಗತ್ಯತೆ ಇದೆಯೆಂದು ಸೂಚ್ಯವಾಗಿ ಹೇಳಿದ್ದಾರೆ. ಬಿಜೆಪಿಯ ಮುಖಂಡರಾದ ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಮೈತ್ರಿ ಮಾತುಕತೆ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ, ಪಕ್ಷದ ಸರ್ವೋಚ್ಛ ನಾಯಕರಾದ ಯಡಿಯೂರಪ್ಪನವರು ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ಗೆ 4 ಕ್ಷೇತ್ರಗಳನ್ನು ಬಿಟ್ಟುಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷ ಅಧಿಕೃತ ಘೋಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಬಹಿರಂಗವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮಾತುಕತೆಯನ್ನು ಸ್ವಾಗತಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ. ಇವೆಲ್ಲದರ ನಡುವೆ ಮೈತ್ರಿ ಮಾತುಕತೆ ವಿಶೇಷವಾಗಿ ಬಿಜೆಪಿಯಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.