ದೊಡ್ಡಬಳ್ಳಾಪುರ: ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಚಾಲಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದ್ದು, ಕ್ರೀಡಾಂಗಣಕ್ಕೆ 900 ಕ್ಕೂ ಹೆಚ್ಚು ವಾಹನಗಳು ಬಂದಿದ್ದ ಪರಿಣಾಮ ಮೈದಾನದ ಟ್ರ್ಯಾಕ್ ಹಾನಿಯಾಗಿದ್ದು, ಕೆಸರುಮಯವಾಗಿದೆ.
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಚಾಲಕರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಮಾರಂಭಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ವಾಹನ ತಂದವರಿಗೆ ಮಾತ್ರ ಕಿಟ್ ವಿತರಣೆ ಮಾಡುವುದಾಗಿ ಆಯೋಜಕರು ಹೇಳಿದ್ದರು. ಈ ಸಂಬಂಧ ಅಯೋಜಕರ ಮಾತಿನ ಅನುಸಾರವಾಗಿ ಚಾಲಕರು ಕ್ರೀಡಾಂಗಣಕ್ಕೆ ತಮ್ಮ ವಾಹನಗಳನ್ನು ತಂದಿದ್ದರು. ಸುಮಾರು 500ಕ್ಕೂ ಹೆಚ್ಚು ಆಟೋಗಳು ಸೇರಿದಂತೆ 900 ಕ್ಕೂ ಹೆಚ್ಚು ವಾಹನಗಳು ಕ್ರೀಡಾಂಗಣಕ್ಕೆ ಬಂದಿದ್ದವು. ಇದರಿಂದ ಕ್ರೀಡಾಂಗಣದಲ್ಲಿನ ಟ್ರ್ಯಾಕ್ ಸಂಪೂರ್ಣ ನಾಶವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಮೈದಾನ ನೀರು ನಿಂದಿದ್ದು, ಇದರ ಮೇಲೆ ಒಮ್ಮೆಲೇ 900 ಕ್ಕೂ ಹೆಚ್ಚು ವಾಹನಗಳು ಓಡಾಡಿದ ಪರಿಣಾಮ ಇಡೀ ಮೈದಾನ ಕೆಸರು ಮಯವಾಗಿತ್ತು.
ಕನ್ನಡ ಪರ ಸಂಘಟನೆಯ ಮುಖಂಡ ಅಕ್ರೋಶ:
ಇಂದಿನ ಕಾರ್ಯಕ್ರಮದಿಂದ ಕ್ರೀಡಾಂಗಣದ ಟ್ರ್ಯಾಕ್ಗೆ ಹಾನಿಯಾಗಿದ್ದು, ಲಕ್ಷಾಂತರ ರೂ.ಖರ್ಚು ಮಾಡಿ ಮೈದಾನದಲ್ಲಿ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಕ್ರೀಡಾಕೂಟಗಳನ್ನು ನಡೆಸಲಾಗುತ್ತಿತ್ತು. ಆದರೀಗ ರಾಜಕೀಯ ಪಕ್ಷವೊಂದರ ಕಾರ್ಯಕ್ರಮಕ್ಕೆ ಕ್ರೀಡಾಂಗಣ ಕೊಟ್ಟ ಪರಿಣಾಮ ಟ್ರ್ಯಾಕ್ಗೆ ಹಾನಿಯಾಗಿದೆ. ಇನ್ನೂಮ್ಮೆ ಕ್ರೀಡಾಂಗಣವನ್ನು ರಾಜಕೀಯ ಕಾರ್ಯಕ್ರಮಕ್ಕೆ ಕೊಟ್ಟಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರೆಬೆತ್ತಲೆ ಮೆರವಣಿಗೆ ಮಾಡುವ ಎಚ್ಚರಿಕೆಯನ್ನು ಕನ್ನಡ ಪರ ಸಂಘಟನೆಯ ಮುಖಂಡ ಚಂದ್ರಶೇಖರ್ ನೀಡಿದರು.