ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ಪ್ರವಾಹಕ್ಕೆ ಕಾರಣವಾದ ರಾಜಕಾಲುವೆಗಳ ಅತಿಕ್ರಮಣಕ್ಕೆ ಅನುಮತಿ ನೀಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬಿಲ್ಡರ್‌ಗಳಿಗೆ ದಂಡ ವಿಧಿಸಬೇಕೆಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಸಲಹೆ ನೀಡಿದ್ದಾರೆ.
ರಾಜಕಾಲುವೆಗಳ ಮೇಲೆ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಈಗ ಕಾರ್ಯಾಚರಣೆ ಆರಂಭಿಸಿದೆ. ಇದೇ ಅತಿಕ್ರಮಣವು ಎರಡು ವಾರಗಳ ಹಿಂದೆಯಷ್ಟೇ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿತ್ತು. ಮಳೆ ನೀರಿನ ಸಮಸ್ಯೆ ಪರಿಹರಿಸಲು ಇದು ತುಂಬಾ ವಿಳಂಬವಾದ ಕ್ರಮವಾಗಿದೆ ಎಂದು ಕಿರಣ್ ಮಜುಂದಾರ್ ಟೀಕಿಸಿದ್ದಾರೆ.
ಅಲ್ಲದೇ, ಈ ಅತಿಕ್ರಮಣಕ್ಕೆ ಬಿಬಿಎಂಪಿ ಮತ್ತು ಬಿಡಿಎ ಹೇಗೆ ಅನುಮತಿ ಕೊಟ್ಟಿತ್ತು?. ಇದರ ಬಗ್ಗೆಯೂ ಸಮಾನಾಂತರ ತನಿಖೆಯಾಗಲಿದೆಯೇ ಎಂದು ಪ್ರಶ್ನಿಸಿರುವ ಅವರು, ಕಟ್ಟಡಗಳನ್ನು ನೆಲಸಮ ಮಾಡುವುದರಿಂದ ಅಸಹಾಯಕ ಮತ್ತು ಮುಗ್ಧ ಮನೆ ಮಾಲೀಕರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದಕ್ಕೆ ಕಾರಣವಾದ ಡೆವಲಪರ್‌ಗಳು ಮತ್ತು ಬಿಡಿಎ ಹಾಗೂ ಬಿಬಿಎಂಪಿಗೆ ಯಾಕೆ ದಂಡ ವಿಧಿಸಬಾರದು. ಇದೇ ಹಣವನ್ನು ಸೂಕ್ತವಾದ ಕಾಲುವೆ ನಿರ್ಮಾಣಕ್ಕೆ ಯಾಕೆ ಬಳಸಬಾರದು ಎಂದು ಕೇಳಿದ್ದಾರೆ.
ಏತನ್ಮಧ್ಯೆ, ಬಿಬಿಎಂಪಿಯು ಗುರುವಾರ ನಾಲ್ಕನೇ ದಿನವೂ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರೆಸಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯು ಬೆಂಗಳೂರಿನ ಕೆಲವು ಭಾಗಗಳನ್ನು ಜರ್ಜರಿತಗೊಳಿಸಿತ್ತು. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾರಿಡಾರ್ ಸೇರಿ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದವು.
ಇದಕ್ಕೆ ರಾಜಕಾಲುವೆಗಳ ಅತಿಕ್ರಮಣವೇ ಕಾರಣ ಎನ್ನಲಾಗಿದ್ದು, ಅತಿಕ್ರಮಣದಲ್ಲಿ ಕೆಲವು ಟೆಕ್ ಪಾರ್ಕ್‌ಗಳು, ಐಟಿ ಕಂಪನಿಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅಪಾರ್ಟ್‌ಮೆಂಟ್ ಸಂಕೀರ್ಣಗಳು ಸೇರಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಬಗ್ಗೆ ಸಿಎಜಿ ವರದಿ ವಿವರಣೆ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ