2013ರ ಬೆಂಗಳೂರು ಎಟಿಎಂ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿ ಮಧುಕರ್ಗೆ 12 ವರ್ಷ ಶಿಕ್ಷೆ ವಿಧಿಸಿ ತೀರ್ಪು ವಿಧಿಸಿ ಬೆಂಗಳೂರಿನ 65ನೇ ಸಿಸಿಎಚ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿ
2013ರಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್ ರೆಡ್ಡಿಯನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ್ದು, ಇಂದು ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಿದೆ.
ಸುಧೀರ್ಘ 3 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ನಗರದ 65 ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಾಲಯ ಮಧುಕರ್ ರೆಡ್ಡಿ ಅವರನ್ನ ಅಪರಾಧಿ ಎಂದು ನಿರ್ಣಯಿಸಿತ್ತು. ಈ ಸಂಬಂಧ ನ್ಯಾಯಾಧೀಶ ರಾಜೇಶ್ವರ ಅವರು ಅಪರಾಧಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಅಭಿಯೋಜಕ ಎಂ.ವಿ ತ್ಯಾಗರಾಜ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ :
2013ರ ನವೆಂಬರ್ 19ರ ಬೆಳಗ್ಗೆ 7 ಗಂಟೆ ಸುಮಾರಿಗೆ ನಗರದ ಕಾರ್ಪೊರೇಷನ್ ಸರ್ಕಲ್ನಲ್ಲಿರುವ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಬಂದಿದ್ದ ಜ್ಯೋತಿ ಉದಯ್ ಅವರಿಗೆ ಹಣ ನೀಡುವಂತೆ ಆರೋಪಿ ಬೆದರಿಸಿದ್ದನು. ಹಣ ನೀಡಲು ನಿರಾಕರಿಸಿದ ಮರುಕ್ಷಣವೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ, ಪರಾರಿಯಾಗಿದ್ದನು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ ಮೂರು ತಿಂಗಳಿಗೂ ಅಧಿಕ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಪತ್ತೆಗೆ ಲಕ್ಷಾಂತರ ರೂ. ಖರ್ಚು :
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಜೆ ಪಾರ್ಕ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಸಾಕಷ್ಟು ಹುಡುಕಾಡಿದ್ದರು. ಆರೋಪಿ ಪತ್ತೆ ಹಚ್ಚಲು ಪೊಲೀಸರು ರಾಜ್ಯವಲ್ಲದೇ ತಮಿಳುನಾಡು, ಆಂಧ್ರ, ತೆಲಂಗಾಣಗಳಿಗೂ ತೆರಳಿದ್ದರು. 4 ಲಕ್ಷ ರೂ. ಖರ್ಚು ಮಾಡಿ ಸುತ್ತಿದರೂ ಆರೋಪಿಯ ಹೆಸರು, ಗುರುತು ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು. ಆರೋಪಿ ಪತ್ತೆ ಹಚ್ಚುವ ಹಠಕ್ಕೆ ಬಿದ್ದಿದ್ದ ಪೊಲೀಸರು ಸುಳಿವು ನೀಡಿದವರಿಗೆ 12 ಲಕ್ಷ ಬಹುಮಾನ ನೀಡುವ ಘೋಷಣೆ ಮಾಡಿದ್ದರು. ಆದರೂ ಆರೋಪಿ ಪತ್ತೆಯಾಗಿರಲಿಲ್ಲ.
ವೃತ್ತಿಪರ ಅಪರಾಧಿ :
ಅಂತಿಮವಾಗಿ 2017ರ ಫೆಬ್ರವರಿ ಕೊನೆ ವಾರದಲ್ಲಿ ಆಂಧ್ರದ ಮದನಪಲ್ಲಿ ಠಾಣೆ ಪೊಲೀಸರು ಮಧುಕರ್ ರೆಡ್ಡಿಯನ್ನು ಬಂಧಿಸಿದ್ದರು. ಆಂಧ್ರ ಮತ್ತು ತೆಲಂಗಾಣದಲ್ಲಿ ನಡೆದ ಮೂರು ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧುಕರ್, ಹೈದರಾಬಾದ್, ಕಡಪ, ಅನಂತಪುರ, ಕೇರಳ ಹೀಗೆ ಐದಾರು ತಿಂಗಳಿಗೆ ಒಮ್ಮೆ ಸ್ಥಾನ ಬದಲಿಸುತ್ತಾ ಓಡಾಡಿಕೊಂಡಿದ್ದನು. ವೃತ್ತಿಪರ ಅಪರಾಧಿಯಾಗಿದ್ದ ರೆಡ್ಡಿಯನ್ನು ರಾಜ್ಯದ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಕೋರ್ಟ್ ಎದುರು ತಪ್ಪೊಪ್ಪಿಕೊಂಡಿದ್ದ :
ಕೋರ್ಟ್ ವಿಚಾರಣೆ ವೇಳೆ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ಒಪ್ಪಿಕೊಂಡಿದ್ದ ರೆಡ್ಡಿ, ಈ ಪ್ರಕರಣದಲ್ಲಿ ವಿಚಾರಣೆಯ ಅಗತ್ಯವಿಲ್ಲ. ಇಂದೇ ನನ್ನ ತಪ್ಪಿಗೆ ಶಿಕ್ಷೆ ನೀಡಿ, ನನ್ನ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದು, ಆದಷ್ಟು ಬೇಗ ವಾಪಸ್ ಹೋಗಬೇಕು. ಹೀಗಾಗಿ ಕೂಡಲೇ ನನಗೆ ಶಿಕ್ಷೆ ನೀಡಿ ಎಂದು ಕೇಳಿಕೊಂಡಿದ್ದನು.
ಇದನ್ನೂ ಓದಿ: ಎಟಿಎಂ ಬಳಕೆ ವೇಳೆ ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ! ಏಕೆ ಗೊತ್ತೇ?