ಬೆಂಗಳೂರು: ಸಿಲಿಕಾನ್ ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಬೇಕು ಎನ್ನುವುದು ಬಹುತೇಕ ಜನರ ಕನಸು. ಇದಕ್ಕೆ ಪುಷ್ಟಿ ನೀಡಲು ಅಮೃತೋತ್ಸವ ಮನೆ ಯೋಜನೆ ಜಾರಿಗೆ ತರಲು ಪಾಲಿಕೆ ಮುಂದಾಗಿದೆ. ಈ ಯೋಜನೆ ಜಾರಿಯಾದರೆ ಫ್ಲ್ಯಾಟ್ ಖರೀದಿದಾರರಿಗೆ 5 ಲಕ್ಷ ರೂಪಾಯಿವರೆಗೆ ಸಹಾಯಧನ ದೊರಯಲಿದೆ.
ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಬೆಂಗಳೂರು ಅಮೃತೋತ್ಸವ ಮನೆ ಯೋಜನೆಗೆ 15 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇಲ್ಲಿಯವರೆಗೆ ಸ್ವಂತ ನಿವೇಶನ ಹೊಂದಿದ್ದವರಿಗೆ ಮಾತ್ರ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡಲಾಗುತ್ತಿತ್ತು. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳಲ್ಲಿ 1 ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ಖರೀದಿಸುವವರಿಗೂ ಈ ಸಹಾಯಧನ ದೊರಕಲಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯಲ್ಲಿರುವ ನಿವೇಶನರಹಿತ ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಂತ ಮನೆ ಕಲ್ಪಿಸಲು ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಬೆಂಗಳೂರು ಅಮೃತೋತ್ಸವ ಮನೆ ಎಂದು ಹೆಸರಿಡಲು ಯೋಜಿಸಲಾಗಿದೆ. ಈ ಯೋಜನೆಗೆ ಬಹುತೇಕ ಅನುಮೋದನೆ ದೊರೆತಿದ್ದು, ಅಧಿಸೂಚನೆ ಹೊರಡಿಸಿವುದು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ತೊರೆಯುವ ಹೇಳಿಕೆ: ಐಟಿಬಿಟಿ ಕಂಪನಿಗಳ ಜೊತೆ ಸಭೆಗೆ ಮುಂದಾದ ಸಿಎಂ