ಬೆಂಗಳೂರು: ಮಹಿಳಾ ಸ್ವಸಹಾಯ ಗುಂಪುಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಿಂದ ವಿತರಿಸುವ ಬಡ್ಡಿರಹಿತ ₹ 5 ಲಕ್ಷದವರೆಗಿನ ಸಾಲಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಕೇಂದ್ರದಿಂದ ನೀಡುವ ಅನುದಾನ ವಿಳಂಬವಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟತೆ ನೀಡಿದರು.
ಕಲಾಪದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕಿ ರೂಪಕಲಾ, ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಜಿಲ್ಲಾ ಸಹಕಾರ ಬ್ಯಾಂಕ್ಗಳ ಮೂಲಕ ಸಾಲ ಕೊಡುವ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದಕ್ಕೆ ಅಡಚಣೆ ಉಂಟಾಗಿದ್ದು, ಕೂಡಲೇ ಬಗೆಹರಿಸುವಂತೆ ಕೋರಿದರು.
ಮಹಿಳಾ ಸಂಘಗಳ ಉದ್ಯಮ ಶೀಲತೆ ಮತ್ತು ಆರ್ಥಿಕಾಭಿವೃದ್ಧಿ ಈ ಸಂಘಗಳ ಬಡ್ಡಿ ರಹಿತ ಸಾಲದಿಂದ ಹೆಚ್ಚಾಗಿದೆ. ಆದರೆ, ಈಚೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಸರ್ಕಾರಗಳು ಘೋಷಿಸಿದ ಈ ಯೋಜನೆಗೆ ಸರ್ಕಾರ ಬ್ಯಾಂಕ್ಗಳಿಗೆ ಬಡ್ಡಿ ಹಣವನ್ನು ಭರಿಸಬೇಕು ಎಂದು ಶಾಸಕಿ ಒತ್ತಾಯಿಸಿದರು.
ಸರ್ಕಾರದ ವಿಳಂಬದಿಂದ ಬ್ಯಾಂಕ್ಗಳು ಹೊಸ ಸಾಲವನ್ನು ಸಹಕಾರ ಸಂಘಗಳಿಗೆ ನೀಡುತ್ತಿಲ್ಲ ಎಂದು ಶಾಸಕ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಬಾಲಕೃಷ್ಣ ಮತ್ತಿತರರು ದನಿ ಗೂಡಿಸಿದರು.